ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಡಕೆ ಗುಣಮಟ್ಟ ನಿಗದಿಗೆ ಪ್ರತ್ಯೇಕ ಸಂಸ್ಥೆ

Lingaraj Badiger
Updated On : 14 Jun 2013, 12:00 pm

ಮಂಗಳೂರು: ನೀರು ಸಹಿತ ಆಹಾರ ವಸ್ತುಗಳಿಗೆ ವೈಜ್ಞಾನಿಕವಾಗಿ ಗುಣಮಟ್ಟ ನಿರ್ಧರಿಸುವ ಸರ್ಕಾರಿ ಸಂಸ್ಥೆಗಳಿವೆ. ಆದರೆ ಆಹಾರ ವಸ್ತುಗಳಲ್ಲಿ ಬಳಸುವ ಜಗಿದು ಉಗುಳುವ ಅಡಕೆಯ ಗುಣಮಟ್ಟ ಖಾತರಿಪಡಿಸುವ ಸರ್ಕಾರದಿಂದ ಅಂಗೀಕೃತ ಸಂಸ್ಥೆ ಈವರೆಗೆ ಇಲ್ಲ.
ಈಗ ಅಡಕೆಯ ಗುಣಮಟ್ಟ ನಿರ್ಧರಿಸುವುದು ಅಡಕೆಯನ್ನು ಮಾರುಕಟ್ಟೆಯಲ್ಲಿ ಕತ್ತರಿಸುವ ಮೂಲಕ. ಅಡಕೆ ರಫ್ತು ವೇಳೆ ಅಡಕೆ ಸಂಶೋಧನಾ ಮತ್ತು ಪ್ರತಿಷ್ಠಾನ ಮುಖೇನ ಗುಣಮಟ್ಟ ತಿಳಿಯುತ್ತಾರೆ. ಇದಾವುದೂ ಸರ್ಕಾರ ಅಂಗೀಕರಿಸಿದ ವೈಜ್ಞಾನಿಕ ಮಾನದಂಡವಲ್ಲ. ಇದರಿಂದಾಗಿ ಆಮದು ಸುಂಕ ಇದ್ದರೂ ಹೇರಳ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ಅಡಕೆ ಆಮದಾದರೂ ಅದನ್ನು ದೃಢೀಕರಿಸಲು ಸಾಧ್ಯವಾಗುವುದಿಲ್ಲ. ಇದೇ ಬೇಕಾಬಿಟ್ಟಿ ಅಡಕೆ ಆಮದಿಗೆ ಕಾರಣವಾಗಿದೆ.
ಇದನ್ನು ತಪ್ಪಿಸಲು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅಡಕೆಗೆ ಗುಣಮಟ್ಟ ನಿಗದಿಗೆ ಸರ್ಕಾರಿ ಸಂಸ್ಥೆಯನ್ನು ನಿಗದಿಪಡಿಸುವಂತೆ ಕೇಂದ್ರವನ್ನು ಕೋರಿದೆ. ರಾಜ್ಯದಲ್ಲಿ ಮೈಸೂರಿನಲ್ಲಿರುವ ಕೇಂದ್ರ ಸ್ವಾಮ್ಯದ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ)ಯನ್ನು ವೈಜ್ಞಾನಿಕ ಗುಣಮಟ್ಟ ನಿಗದಿ ಕೇಂದ್ರವಾಗಿ ಪರಿಗಣಿಸುವಂತೆ ಪತ್ರ ಬರೆದಿದೆ.
ಪಿಲಿಗುರಿ ಕಲಿಸಿದ ಪಾಠ: ನೇಪಾಳ ಗಡಿ ಪಿಲಿಗುರಿಯಿಂದ ಕಳೆದ ವರ್ಷ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 9 ತಿಂಗಳಲ್ಲಿ 63 ಸಾವಿರ ಟನ್ ಅಡಕೆ ಭಾರತಕ್ಕೆ ಆಮದಾಗಿತ್ತು. ಬಾಂಗ್ಲಾದಿಂದಲೇ ಗರಿಷ್ಠ 52 ಸಾವಿರ ಟನ್ ಅಡಕೆ ಆಮದಾಗಿತ್ತು.
 ಭಾರತಕ್ಕೆ ಒಟ್ಟು 13 ದೇಶಗಳಿಂದ ಅಡಕೆ ಆಮದಾಗುತ್ತಿದೆ. ದೇಶದ ಪಿಲಿಗುರಿಯಲ್ಲಿ ಕಳಪೆ ಗುಣಮಟ್ಟದ ಬಾಂಗ್ಲಾ ಆಮದು ಅಡಕೆಯನ್ನು ಕಸ್ಟಮ್ಸ್ ವಿಭಾಗ ಪತ್ತೆಮಾಡಿ ವಶಪಡಿಸಿತ್ತು. ಗುಣಮಟ್ಟ ಪರೀಕ್ಷೆಗೆ ಅಡಕೆ ಸ್ಯಾಂಪಲ್‌ನ್ನು ಕ್ಯಾಂಪ್ಕೋದ ಸಂಶೋಧನಾ ಪ್ರತಿಷ್ಠಾನಕ್ಕೆ ಕಳುಹಿಸಿತ್ತು. ಅಲ್ಲಿ ಅಡಕೆ ಕಳಪೆ ಗುಣಮಟ್ಟ, ತಿನ್ನಲು ಅಯೋಗ್ಯ ಎಂದು ಸಾಬೀತಾಗಿತ್ತು.
ಸಂಶೋಧನಾ ಪ್ರತಿಷ್ಠಾನ ಸರ್ಕಾರದ ಅಧಿಕೃತ ಪ್ರಯೋಗಾಲಯ ಅಲ್ಲ, ಹಾಗಾಗಿ ಪ್ರತಿಷ್ಠಾನ ದೃಢಪಡಿಸಿದರೂ ಅದಕ್ಕೆ ಮಾನ್ಯತೆ ಇಲ್ಲ. ಮಾತ್ರವಲ್ಲ ಕಸ್ಟಮ್ಸ್‌ನ ಸಾರ್ವಜನಿಕ ಆರೋಗ್ಯ ಅಧಿಕಾರಿ(ಪಿಎಚ್‌ಒ)ವಿಭಾಗದಲ್ಲೂ ಅಡಕೆ ಗುಣಮಟ್ಟ ಖಾತರಿ ಪಡಿಸುವ ಯಾವುದೇ ಲ್ಯಾಬ್ ಇಲ್ಲ. ಈ ಕಾರಣದಿಂದ ವಶಪಡಿಸಿದ ಅಡಕೆಯನ್ನು ವಾಪಾಸ್ ನೀಡಿತು.
ದೇಶದ ಎಲ್ಲ ಬಂದರುಗಳಲ್ಲೂ ಕಸ್ಟಮ್ಸ್ ತಪಾಸಣೆ ಇದ್ದರೂ ಗುಣಮಟ್ಟ ಖಾತರಿಯ ಲ್ಯಾಬ್ ಇಲ್ಲದಿರುವುದರಿಂದ ಇದನ್ನೇ ಕಳಪೆ ಅಡಕೆ ಆಮದಿಗೆ ಮಾನದಂಡವಾಗಿ ಆಮದುದಾರರು ಬಳಸುತ್ತಾರೆ. ಕಳಪೆ ಅಡಕೆಯನ್ನೇ ಗುಣಮಟ್ಟದ ಅಡಕೆ ಜತೆ ಬೆರೆಸಿ ಮಾರಾಟ ಮಾಡುತ್ತಾರೆ. ಕಸ್ಟಮ್ಸ್ ಪತ್ತೆಮಾಡಿದರೂ ಏನೂ ಕ್ರಮ ಕೈಗೊಳ್ಳಲಾಗದ ಪರಿಸ್ಥಿತಿ.
ಸಿಎಫ್‌ಟಿಆರ್‌ಐ ಬೇಡಿಕೆ: ದೇಶಾದ್ಯಂತ ಕೇಂದ್ರ ಆಹಾರ ಸಂಶೋಧನಾ ಸಂಸ್ಥೆ ಇರುವುದರಿಂದ ಅದನ್ನೇ ಅಡಕೆ ಗುಣಮಟ್ಟ ಪರೀಕ್ಷೆಗೆ ಪರಿಗಣಿಸುವಂತೆ ಅನುಮತಿ ನೀಡಬೇಕು. ರಾಜ್ಯದಲ್ಲಿ ಮೈಸೂರಿನಲ್ಲಿ ಇದರ ಶಾಖೆ ಇದೆ. ಪತ್ತೆಯಾಗುವ ವಿದೇಶಿ ಆಮದು ಅಡಕೆ ಸ್ಯಾಂಪಲ್ ನೀಡಿ ಗುಣಮಟ್ಟ ಖಾತರಿಪಡಿಸಲು ಕಸ್ಟಮ್ಸ್‌ಗೆ ಸಾಧ್ಯವಾಗುತ್ತದೆ ಎನ್ನುವುದು ಕ್ಯಾಂಪ್ಕೋ ಅಂಬೋಣ.
- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement