ಕನ್ಯಾನ: ಭಾರಿ ಮಳೆಗೆ ಗುಡ್ಡ ಕುಸಿತ, ಹಾನಿ
ವಿಟ್ಲ: ಭಾರಿ ಮಳೆಗೆ ಕನ್ಯಾನ ಗ್ರಾಮದ ಬೈರಿಕಟ್ಟೆ ಮಸೀದಿ ಮುಂಭಾಗದ ಗುಡ್ಡ ಕುಸಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಗುಡ್ಡ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಈ ಮಾರ್ಗದಲ್ಲಿ ಜೀವಭಯದೊಂದಿಗೆ ಸಂಚರಿಸಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಈ ರಸ್ತೆ ಬದಿಯ ಗಡ್ಡ ಕುಸಿದ ಪರಿಣಾಮ ಅದರ ಸಮೀಪವಿರುವ ಮಸೀದಿಯ ಕಾಂಪೌಂಡ್ ಕೂಡ ಕುಸಿಯುವ ಹಂತದಲ್ಲಿದೆ. ಬೈರಿಕಟ್ಟೆ ಜುಮಾ ಮಸೀದಿಯ ಮುಂಭಾಗದಲ್ಲಿರುವ ಬೈರಿಕಟ್ಟೆ- ಕಾಡುಮನೆ ಸಂಪರ್ಕ ಮಣ್ಣಿನ ರಸ್ತೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇದೇ ರಸ್ತೆಗೆ ಬೈರಿಕಟ್ಟೆ ಜುಮಾ ಮಸೀದಿಯ ಕಾಂಪೌಂಡ್ ತಾಗಿಕೊಂಡಿರುವ ಪರಿಣಾಮ ಅಪಾಯದಲ್ಲಿದೆ. ಕುಸಿದ ಮಣ್ಣೆಲ್ಲ ಅಬೂಬಕ್ಕರ್ ಮನೆಯ ಅಂಗಳಕ್ಕೆ ಜರಿದು ಬಿದ್ದ ಪರಿಣಾಮ ಅವರ ಕೊಟ್ಟಿಗೆಯ ಸಿಮೆಂಟ್ ಶೀಟಿಗೆ ಹಾನಿಯಾಗಿದೆ. ಬುಧವಾರ ರಾತ್ರಿಯಿಂದಲೇ ಗುಡ್ಡದ ಮಣ್ಣೆಲ್ಲ ನಿರಂತರವಾಗಿ ಕುಸಿಯುತ್ತಿದೆ. ಕಾಡುಮನೆ ಎಂಬಲ್ಲಿ 17ಕ್ಕಿಂತಲೂ ಅಧಿಕ ಮನೆಗಳಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ.