ಕಲಿಕೆ ಸಹಜವಾದಾಗ ಮಾತ್ರ ಶಿಕ್ಷಣ ಸಂತಸದಾಯಕ: ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ: ವಿದ್ಯಾರ್ಥಿಗಳು ಪರೀಕ್ಷೆ ಭಯ ಮತ್ತು ಪೋಷಕರ ಒತ್ತಡದಿಂದ ಕಲಿಯಬಾರದು. ಬಾಹ್ಯ ಹಾಗೂ ಆಂತರಿಕ ಸೌಂದರ್ಯದೊಂದಿಗೆ ವಿದ್ಯಾಸಂಸ್ಥೆಗಳಲ್ಲಿ ಪೂರಕ ವಾತಾವರಣವಿದ್ದು ಕಲಿಕೆ ಸಹಜವಾದಾಗ ಮಾತ್ರ ಶಿಕ್ಷಣ ಸಂತಸದಾಯಕವಾಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾಂತ್ರಿಕ ಅಧ್ಯಯನ ಮಾಡುವ ಬದಲು ವಿದ್ಯಾರ್ಥಿಗಳು ಸಹಜವಾಗಿ ಪ್ರೀತಿಯಿಂದ ಮತ್ತು ಆಸಕ್ತಿಯಿಂದ ಕಲಿಯಬೇಕು. ಪ್ರಶ್ನೆ ಕೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್.ಡಿ.ಎಂ ವಿದ್ಯಾಸಂಸ್ಥೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ಜೊತೆಗೆ ಮಾತೃಭಾಷೆ ಕನ್ನಡದ ಅಧ್ಯಯನ ಹಾಗೂ ಸಾಹಿತ್ಯದ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಧರ್ಮಸ್ಥಳದಿಂದ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.
ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕೆ ಕೆ. ವಸಂತ ಬಂಗೇರ, ನೂತನ ಶಾಲಾ ಕಟ್ಟಡ ಬೆಳ್ತಂಗಡಿಗೆ ಹೆಚ್ಚಿನ ಶೋಭೆಯನ್ನು ತಂದಿದೆ. ಬೆಳ್ತಂಗಡಿಯಲ್ಲಿ ಸದ್ಯದಲ್ಲಿಯೇ ಎರಡು ವಿದ್ಯಾರ್ಥಿ ನಿಲಯಗಳನ್ನು ಸರ್ಕಾರದ ವತಿಯಿಂದ ಪ್ರಾರಂಭಿಸಲಾಗುವುದು ಎಂದು ಪ್ರಕಟಿಸಿದರು.
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಮೋಸೆಸ್ ಜಯಶೇಖರ್ ಮತ್ತು ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸದಸ್ಯ ಮುಗುಳಿ ನಾರಾಯಣ ರಾವ್ ಶುಭ ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಪಿ., ಪ್ರೊ. ಎಸ್. ಪ್ರಭಾಕರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಎಸ್.ಡಿ.ಎಂ ಕಾಲೇಜು ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಇದ್ದರು.