ಕೆಸರ್ 'ರೋಡ್'ನಲ್ಲಿ ಪಾದಚಾರಿಗಳ ಸರ್ಕಸ್!
ಬಂಟ್ವಾಳ: ಬಿ.ಸಿ. ರೋಡಿನಲ್ಲಿ ಬಸ್ ಏರುವವರು, ಬಸ್ ಇಳಿಯುವವರು ಹೆಜ್ಜೆ ಹಾಕಬೇಕಾದರೆ ಎಚ್ಚರ ಅತಿ ಅಗತ್ಯ. ವರ್ಷಂಪ್ರತಿಯಂತೆ ಬಿ.ಸಿ. ರೋಡು ಈ ಬಾರಿಯೂ ಕೆಸರ್ ರೋಡ್ ಆಗಿರುವುದೇ ಇದಕ್ಕೆ ಕಾರಣ.
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಮೇಲು ಸೇತುವೆ ಪಕ್ಕದ ಸರ್ವಿಸ್ ರೋಡ್ ಸಂಪೂರ್ಣ ಕೆಸರುಮಯವಾಗಿದ್ದು, ಪಾದಚಾರಿಗಳಿಗೆ ಸಂಕಷ್ಟ ಒದಗಿಸಿದೆ. ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪೊಲೀಸ್ ಇಲಾಖೆ ಸಂಚಾರ ನಿಯಮಗಳನ್ನು ಬದಲಿಸಿದ್ದು, ಸರ್ವಿಸ್ ರೋಡಿನಲ್ಲಿ ಬಸ್ ಏರುವವರು, ಇಳಿಯುವವರು ಸ್ಥಳಿಯಾಡಳಿತಕ್ಕೆ ಹಿಡಿಶಾಪ ಹಾಕುವ ದೃಶ್ಯ ಕಂಡುಬರುತ್ತಿದೆ. ಬಿ.ಸಿ. ರೋಡಿನಲ್ಲಿ ಮೇಲ್‌ಸೇತುವೆ ಕಾಮಗಾರಿ ಆರಂಭಗೊಂಡ ಬಳಿಕದಿಂದ ಬಿ.ಸಿ. ರೋಡು ಕೆಸರು ರೋಡು ಆಗುತ್ತಲೇ ಇದೆ. ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣ.
ರಸ್ತೆಯೇ ಚರಂಡಿಯಾದ ಹಿನ್ನೆಲೆಯಲ್ಲಿ ಕೆಸರು ಗದ್ದೆಯ ಸೃಷ್ಟಿಯಾಗುತ್ತಿದೆ. ಸೂಕ್ತವಾದ ಚರಂಡಿ ಬೇಡಿಕೆ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದ್ದರೂ ಸ್ಥಳೀಯಾಡಳಿತ ಹಾಗೂ ಹೆದ್ದಾರಿ ಇಲಾಖೆ ಸಾರ್ವಜನಿಕರ ಬೇಡಿಕೆಯನ್ನು ನಿರ್ಲಕ್ಷ್ಯಿಸಿರುವ ಹಿನ್ನೆಲೆಯಲ್ಲಿ ಇಲ್ಲಿ ನಡೆದು ಹೋಗುವ ಪಾದಚಾರಿಗಳು ಕಷ್ಟ ಪಡುವಂತಾಗಿದೆ.