ಪೊಲೀಸರಿಗೆ ಹಲ್ಲೆ: ಜೂ.15ಕ್ಕೆ ವಿಚಾರಣೆ ಮುಂದೂಡಿಕೆ
ಮಂಗಳೂರು: ಅಳಕೆ ಮೈದಾನ ಬಳಿ ಕರ್ತವ್ಯ ನಿರತ ಪೊಲೀಸರ ಲಾಠಿ ಕಿತ್ತುಕೊಂಡು ಹಲ್ಲೆ ನಡೆಸಿದ ಆರೋಪಿ ಕಾರ್ಪೊರೇಟರ್ ಮತ್ತವರ ತಂಡವನ್ನು ಬಂಧಿಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ. ಇತ್ತ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜೂ.15ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇದೇ ವೇಳೆಗೆ ಹಲ್ಲೆಗೊಳಗಾದ ಇಬ್ಬರು ಪೊಲೀಸರು 15 ದಿನಗಳ ಅನಾರೋಗ್ಯ ರಜೆ ಮುಗಿಸಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಮೇ 27ರಂದು ಅಳಕೆ ಮೈದಾನದಲ್ಲಿ ಮಧ್ಯರಾತ್ರಿ ವೇಳೆ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಬಿಜೆಪಿ ಕಾರ್ಪೊರೇಟರ್ ರಘುವೀರ್, ಮಾಜಿ ಕಾರ್ಪೊರೇಟರ್ ಯಶವಂತ್ ಸಹಿತ ಐವರಿದ್ದ ತಂಡದ ವಿರುದ್ಧ ಸ್ಥಳೀಯರೇ ದೂರು ನೀಡಿದ್ದರು.
ನಾಯಿಗಳ ದಾಳಿ: ಜಿಂಕೆ ಸಾವು
ಜೋಯಿಡಾ: ತಾಲೂಕು ಕೇಂದ್ರ ಜೋಯಿಡಾದ ಮಾರುತಿ ದೇವಸ್ಥಾನದ ಸಮೀಪ ಜಿಂಕೆಯೊಂದು ನಾಯಿ ಕಡಿತಕ್ಕೆ ತುತ್ತಾಗಿ ಮೃತಪಟ್ಟಿದೆ. ಗುರುವಾರ ಬೆಳಗ್ಗೆ ಕಾಡಿನಿಂದ ನಾಡಿನತ್ತ ಬಂದ ಜಿಂಕೆ ಮೇಲೆ ನಾಯಿಗಳ ಗುಂಪೊಂದು ದಾಳಿ ನಡೆಸಿದ ಪರಿಣಾಮ ಅದು ತೀವ್ರವಾಗಿ ಗಾಯಗೊಂಡಿತ್ತು. ನಾಯಿ ದಾಳಿಯನ್ನು ತಪ್ಪಿಸಲು ಸ್ಥಳಿಯರು ಯತ್ನಿಸುವ ಜತೆಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಪಶುವೈದ್ಯರು ಆಗಮಿಸಿ ಚಿಕಿತ್ಸೆ ಆರಂಭಿಸುವ ಹೊತ್ತಿಗೆ ಜಿಂಕೆ ಕೊನೆಯುಸಿರೆಳೆದಿತ್ತು. ಜೋಯಿಡಾ ವಲಯ ಅರಣ್ಯಾಧಿಕಾರಿ ಸತೀಶ್ ಪೂಜಾರ ಪ್ರಕರಣ ದಾಖಲಿಸಿಕೊಂಡು ಇಲಾಖೆಯ ನಿಯಮದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ. ಸಹಾಯಕ ಅರಣ್ಯಾಧಿಕಾರಿಗಳಾದ ಫೆಲ್ಲಣವರ್, ಎಲ್.ಎಂ. ನಾಯ್ಕ, ಸಂತೋಷ್ ಗವಾಸ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮಗು ಕೊಂದು ತಾಯಿ ಆತ್ಮಹತ್ಯೆ
ಸವದತ್ತಿ: ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಮಹಿಳೆಂೋರ್ವಳು ನಾಲ್ಕು ವರ್ಷದ ಹೆಣ್ಣು ಮಗುವಿಗೆ ವಿಷ ಕುಡಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮುಂಜಾನೆ ನಡೆದಿದೆ. ಮಂಜುಳಾ ಶಿಂಧೆ (24), ಕಾವ್ಯಾ ಶಿಂಧೆ (4) ಮೃತರು. ಮನೆಯಲ್ಲಿ ಮಗಳಿಗೆ ಕ್ರಿಮಿನಾಶಕ ಕುಡಿಸಿ, ತಾನೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರ ಸಾವಿಗೆ ಗ್ರಾಮಸ್ಥರು ಸಂಶಂು ವ್ಯಕ್ತಪಡಿಸಿದ್ದಾರೆ. ಮುರಗೋಡ ಠಾಣೆಂುಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕುಳ: ಪೋಸ್ಟ್ ಮಾಸ್ಟರ್ ಆತ್ಮಹತ್ಯೆ
ಬೈಲುಕುಪ್ಪೆ: ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಮನನೊಂದು ಪೋಸ್ಟ್ ಮಾಸ್ಟರ್ವೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಣಸೂರು ಗ್ರಾಮದಲ್ಲಿ ಗುರುವಾರ ಜರುಗಿದೆ. ಕೊಣಸೂರು ಗ್ರಾಮದ ಬಸವರಾಜು ಎಂಬವರ ಪುತ್ರ ಕೆ.ಬಿ. ಜಲೇಂದ್ರ (24) ಮೃತಪಟ್ಟಪಟ್ಟವರು. ಜಲೇಂದ್ರ ಅವರು ಕಳೆದ ಎರಡು ವರ್ಷಗಳಿಂದ ಚಿಕ್ಕನೇರಳೆ ಶಾಖೆಯ ಅಂಚೆ ಕಚೇರಿಯಲ್ಲಿ ಪೋಸ್ಟ್ಮಾಸ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಕೆ.ಆರ್. ನಗರದ ವಿಭಾಗದಿಂದ ಇನ್ಸ್ಪೆಕ್ಟರ್ ಅಮಿತಕುಮಾರ್ ಜಾ ಎಂಬವವರು ಚಿಕ್ಕನೇರಳೆ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕೆ.ಬಿ. ಜಲೇಂದ್ರ ಅವರನ್ನು ಅಮಾನತು ಮಾಡಿದರು ಎನ್ನಲಾಗಿದೆ. ಈ ವಿಷಯವನ್ನು ತನ್ನ ಸಹಪಾಠಿಗಳೊಂದಿಗೆ ಹೇಳಿಕೊಂಡು ತುಂಬಾ ಬೇಜಾರಿನಲ್ಲಿದ್ದರು. ಗುರುವಾರ ಬೆ.6ರ ಸಮಯದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದರು. ಕೂಡಲೇ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಪೂನಾಡಹಳ್ಳಿಯ ಮಧ್ಯ ಮೃತಪಟ್ಟರು. ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಂಡನೆ: ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಡಿ.ಕೆ. ಸ್ವಾಮಿ ಮಾತನಾಡಿ, ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಿ ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು. ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ರಾಮ್ಪ್ರಿಯ, ಖಜಾಂಚಿ ಸಿ.ಆರ್. ಕುಮಾರ್ ಇತರರು ಇದ್ದರು.