ಮನುಷ್ಯನ ದುರಾಸೆಯಿಂದ ಪರಿಸರ ನಾಶ: ಪ್ರಕಾಶ್
ಬೆಳ್ತಂಗಡಿ: ಈ ಭೂಮಿ ಇಲ್ಲದೆ ನಮ್ಮ ಬದುಕು ಇಲ್ಲ. ಮನುಷ್ಯನ ದುರಾಸೆಯಿಂದ ಪರಿಸರ ಹಾಳಾಗುತ್ತಿದೆ. ಪ್ರಕೃತಿಯೂ ಮುನಿದಿದೆ. ಹಿಂದೆ ಕಾಲ- ಕಾಲಕ್ಕೆ ಸರಿಯಾಗಿ ಮಳೆ ಬರುತ್ತಿತ್ತು. ಈಗ ಬರುತ್ತಿಲ್ಲ. ಕುಡಿಯುವ ನೀರಿಗೆ ಹಾಲಿಗಿಂತ ಬೆಲೆ ಜಾಸ್ತಿಯಾಗುವ ಕಾಲ ಬರುತ್ತಿದೆ. ಪರಿಸರ ಸರಿ ಇಲ್ಲದಿದ್ದರೆ ಜೀವರಾಶಿಗಳ ಮಾರಣ ಹೋಮವಾದೀತು ಎಂದು ಬೆಳ್ತಂಗಡಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ್ ಕೆ. ಅಭಿಪ್ರಾಯಪಟ್ಟರು.
ಅವರು ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ, ನಾಗರಿಕ ಸೇವಾ ಟ್ರಸ್ಟ್, ದ.ಕ. ಪರಿಸರಾಸಕ್ತರ ಒಕ್ಕೂಟ, ವಕೀಲರ ಸಂಘ, ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಗುರುವಾಯನಕೆರೆಯ ಟ್ರಸ್ಟ್ ಸಭಾಭವನದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಇವರು ಹಣ್ಣಿನ ಗಿಡ ಕೊಡುವುದರ ಮೂಲಕ ಉದ್ಘಾಟಿಸಿದರು.
ಸಭಾಧ್ಯಕ್ಷತೆ ವಹಿಸಿದ ಟ್ರಸ್ಟ್ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಮಾತನಾಡುತ್ತಾ ಜನಪರ- ಪರಿಸರಪರ ಚಿಂತನೆಯೊಂದಿಗೆ ಕಾರ್ಯಾಚರಣೆ ಮಾಡುತ್ತಾ ಬಂದಿರುವ ಟ್ರಸ್ಟ್ ಪಶ್ಚಿಮ ಘಟ್ಟ ಪಾದಯಾತ್ರೆ, ದಕ್ಷಿಣ ಕನ್ನಡ ಉಳಿಸಿ ಅಭಿಯಾನ, ಬಡಜನರ ಹಕ್ಕಿಗಾಗಿ ಹೋರಾಟ- ಅಭಿಯಾನ ಮಾಡುತ್ತಾ ಬಂದಿದೆ ಎಂದರು.
ಈ ಭೂಮಿ ನಮ್ಮ ತಾತ ಮುತ್ತಾತರಿಂದ ಬಂದ ಬಳುವಳಿ ಅಲ್ಲ. ನಮ್ಮ ಮಕ್ಕಳು ಮೊಮ್ಮಕ್ಕಳಿಂದ ಎರವಲು ಪಡೆದದ್ದು ಎನ್ನುವ ಡಾ. ಶಿವರಾಮ ಕಾರಂತರ ಮಾತನ್ನು ನೆನಪಿಸಿದರು. ಸರ್ಕಾರವೇ ತಯಾರಿಸಿದ ಅಧ್ಯಯನ ವರದಿಯನ್ನು ನಿರ್ಲಕ್ಷಿಸಿ ಪರಿಸರ ಘಾತಕ ಬೃಹತ್ ಕೈಗಾರಿಕೆಗಳಿಗೆ ಕರಾವಳಿ ಜಿಲ್ಲೆಗಳಲ್ಲಿ ಅನುಮತಿ ನೀಡಿ ಪರಿಸರ ನಾಶ ಮಾಡುತ್ತಿದೆ ಎಂದು ಸರಕಾರಗಳ ಇಬ್ಬಗೆ ಧೋರಣೆ ಟೀಕಿಸಿದರು.
ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶಿವಕುಮಾರ್ ಎಸ್.ಯಂ. ಮಾತನಾಡುತ್ತಾ ಪರಿಸರದ ಪರವಾಗಿ ಹಲವು ಕಾನೂನುಗಳು ಇದ್ದರೂ ಪರಿಸರ ಮಾತ್ರ ಹಾಳಾಗುತ್ತಿದೆ. ಪರಿಸರ ಸಂರಕ್ಷಣಾ ಕಾಯ್ದೆ, ನೀರಿನ ಕಾಯ್ದೆ, ಅರಣ್ಯ ಕಾಯ್ದೆ, ಶಬ್ದ ಮಾಲಿನ್ಯ ಕಾಯ್ದೆಗಳ ಬಗ್ಗೆ ವಿವರಿಸುತ್ತಾ ಇವೆಲ್ಲ ಕಾಯ್ದೆಗಳಿದ್ದರೂ ಇದನ್ನು ಲೆಕ್ಕಿಸದೆ ಬೃಹತ್ ಉದ್ಯಮಿಗಳ ಲಾಭಕೋರತನಕ್ಕಾಗಿ ಪರಿಸರ ನಾಶ ಆಗುತ್ತಿದೆ. ಕಾಯ್ದೆಗಳೇನಿದ್ದರೂ ಬಡವರಿಗೆ, ಅರಣ್ಯವಾಸಿಗಳಿಗೆ ಲಗಾವಾಗುತ್ತದೆ, ಶ್ರೀಮಂತರಿಗೆ ಅಲ್ಲ ಎಂದು ವಿಷಾದಿಸಿದರು.
ದ.ಕ. ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ ಉಮೇಶ್ ನಿರ್ಮಲ್ ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ವಿಷಯವಾದ ಯೋಚಿಸಿ- ಸೇವಿಸಿ- ಉಳಿಸಿ ವಿಷಯದ ಕುರಿತು ಮಾತನಾಡುತ್ತಾ ಊಟದ 30ರಷ್ಟು ಹಾಳಾಗುತ್ತಿದೆ ಎಂದು ಅಧ್ಯಯನ ಹೇಳಿದೆ.
ಈ ವರ್ಷ ವಿಶ್ವಸಂಸ್ಥೆ ಮಂಗೋಲಿಯಾದಲ್ಲಿ ವಿಶ್ವ ಪರಿಸರ ದಿನ ಆಚರಿಸುತ್ತಿದೆ. ಅಲ್ಲಿ ಜನರ ಮುಖ್ಯ ಉದ್ಯೋಗ ಕೃಷಿ ಅದೂ ಮುಖ್ಯವಾಗಿ ಆಹಾರ ಬೆಳೆ. ಅದರಲ್ಲಿ ಬೆಳೆದ ಶೇ. 80ರಷ್ಟು ರಫ್ತು ಮಾಡುತ್ತಿದ್ದಾರೆ. ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು ನಾವು ಆಹಾರ ಬೆಳೆಗಳ ರಫ್ತಿಗಿಂತ ಕೈಗಾರಿಕಾ ಉತ್ಪನ್ನಗಳ ರಫ್ತಿನ ಬಗ್ಗೆಯೇ ಮಾತನಾಡುತ್ತೇವೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಸಿ.ಕೆ. ಚಂದ್ರಕಲಾ, ಕರಾವಳಿ ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಮುಮ್ತಾಜ್, ಕೃಷಿಕರ ವೇದಿಕೆಯ ಅಧ್ಯಕ್ಷ ವಿಠಲ ಶೆಟ್ಟಿ ಪಾದೂರು ಉಪಸ್ಥಿತರಿದ್ದರು.
ಟ್ರಸ್ಟ್ನ ಉಪಾಧ್ಯಕ್ಷೆ ವಿದ್ಯಾ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ಭಟ್ ಎಚ್ ವಂದಿಸಿದರು.
ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ, ಬಂಟ್ವಾಳ: ವಿಶ್ವ ಪರಿಸರ ದಿನಾಚರಣೆ
ಸುಳ್ಯ: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಅರಣ್ಯ ಇಲಾಖೆ ಸುಳ್ಯ ಆಶ್ರಯದಲ್ಲಿ ತಾಲೂಕು ನ್ಯಾಯಾಲಯದ ಆವರಣದಲ್ಲಿ 'ವಿಶ್ವ ಪರಿಸರ ದಿನಾಚರಣೆ' ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಾಗೂ 'ಕಾನೂನು ಸಾಕ್ಷರತಾ ಕಾರ್ಯಕ್ರಮ' ಇತ್ತೀಚೆಗೆ ನಡೆಯಿತು.
ನ್ಯಾಯಾಧೀಶ ಸಿ.ಕೆ.ಬಸವರಾಜ್ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ನಳಿನ್ ಕುಮಾರ್ ಕೆ. ಅಧ್ಯಕ್ಷತೆ ವಹಿಸಿದ್ದರು. ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯಕ್ ವಿಶ್ವ ಪರಿಸರ ದಿನಾಚರಣೆಯ ಬಗ್ಗೆ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಮಂಗಳೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕೆ.ಕೃಷ್ಣಮೂರ್ತಿ ಭಾಗವಹಿಸಿದರು.
ವಿಶ್ವ ಪರಿಸರ ದಿನಾಚರಣೆ ಮಹತ್ವ ಮತ್ತು ಕರ್ನಾಟಕ ಅರಣ್ಯ ಕಾಯ್ದೆ ಕುರಿತು ನ್ಯಾಯವಾದಿ ಜಗದೀಶ್ ಹುದೇರಿ ಮಾತನಾಡಿದರು.
ವಕೀಲರ ಸಂಘದ ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ ನಿರೂಪಿಸಿ, ಸ್ವಾಗತಿಸಿದರು. ನ್ಯಾಯವಾದಿ ಹರೀಶ್ ಬೂಡುಪನ್ನೆ ವಂದಿಸಿದರು.
ಬಂಟ್ವಾಳ: ನಮ್ಮ ಸಂರಕ್ಷಣೆಗೆ ಪರಿಸರವನ್ನು ಸಂರಕ್ಷಣೆ ಮಾಡುವುದು ಅಗತ್ಯ. ಪರಿಸರ ಮಾಲಿನ್ಯ ತಡೆ ಹಾಗೂ ಸಮತೋಲನ ಕಾಪಾಡುವಲ್ಲಿ ನಮ್ಮ ಜವಬ್ದಾರಿ ಮಹತ್ತರವಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷೆ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಕೆ. ನವೀನ ಕುಮಾರಿ ಹೇಳಿದರು.
ಅವರು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಮತ್ತು ಅರಣ್ಯ ಇಲಾಖೆ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಂಟ್ವಾಳ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಅವರಣದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ, ಪ್ರಧಾನ ಸಿವಿಲ್ ನ್ಯಾಯಧೀಶ ಶ್ರೀನಿವಾಸ, ಹೆಚ್ಚುವರಿ ಸಿವಿಲ್ ನ್ಯಾಯಧೀಶ ಜಯಪ್ರಕಾಶ್ ಡಿ.ಆರ್., ತಹಸೀಲ್ದಾರ್ ಮಲ್ಲೇಸ್ವಾಮಿ, ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಕೆ. ರಾಮಚಂದ್ರ ಭಟ್, ಶ್ರೀಧರ ಪೈ, ಉಪಾಧ್ಯಕ್ಷ ವೆಂಕಟರಮಣ ಗೌಡ ಮತ್ತು ಇಲಾಖೆಯ ಸಿಬ್ಬಂದಿ, ವಕೀಲರ ಸಂಘದ ಪದಾಧಿಕಾರಿ ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.