ಮುಗಿಯದ ಮಿನಿ ವಿಧಾನಸೌಧ ಕಾಮಗಾರಿ: ಶಾಸಕಿ ಆಕ್ರೋಶ
ಪುತ್ತೂರು: ರಾಜ್ಯದಲ್ಲಿ ಎಲ್ಲ ಕಡೆ ಮಿನಿ ವಿಧಾನಸೌಧಗಳು ಉದ್ಘಾಟನೆಗೊಂಡು ಮೂರು ವರ್ಷಗಳಾಗಿವೆ. ಆದರೆ ಪುತ್ತೂರಿನಲ್ಲಿರುವ ಮಿನಿ ವಿಧಾನಸೌಧಕ್ಕಾಗಿ ಕೋಟಿಗಟ್ಟಲೆ ಹಣ ಸಕಾಲದಲ್ಲಿ ಮಂಜೂರಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಸ್ಥಳಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಾದುರಸ್ತಿಯಲ್ಲಿ ಸಾಮರ್ಥ್ಯ ಸೌಧ: ಬಳಿಕ ತಾಲೂಕು ಪಂಚಾಯಿತಿ ಹಿಂಭಾಗದಲ್ಲಿರುವ ಸಾಮರ್ಥ್ಯ ಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರು. 32 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಕಾಮಗಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕಿ, ಸಾಮರ್ಥ್ಯ ಸೌಧ ಕಟ್ಟಡ ನಾದುರಸ್ತಿಯಲ್ಲಿದ್ದು, ಇಲ್ಲಿನ ಟೈಲ್ಸ್ ಎದ್ದುಹೋಗಿದೆ, ಅಲ್ಲಲ್ಲಿ ಗೋಡೆ ಬಿರುಕು ಬಿಟ್ಟಿದೆ, ಕಡತದ ಪ್ರತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಒಂದು ನೂತನ ಕಟ್ಟಡ ಈ ರೀತಿ ಕಳಪೆಯಾಗಿರುವುದು ವಿಷಾದನೀಯ ಎಂದರು. ಕಟ್ಟಡ ಬಗ್ಗೆ ಗಮನ ಹರಿಸದಿರುವ ತಾಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಕಟ್ಟಡದ ಎಂಜಿನಿಯರನ್ನು ಈ ಸಂದರ್ಭ ಶಕುಂತಳಾ ಶೆಟ್ಟಿ ತರಾಟೆಗೆ ತೆಗೆದುಕೊಂಡರು.
ಸಾಮರ್ಥ್ಯ ಸೌಧದ ಮುಂಭಾಗದಲ್ಲಿರುವ ಹಳೆ ತಾಲೂಕು ಪಂಚಾಯಿತಿ ಕಟ್ಟಡದ ಸ್ಥಿತಿ ಚಿಂತಾಜನಕವಾಗಿದೆ. ಇದರ ದುರಸ್ತಿಗಾಗಿ ರು. 10 ಲಕ್ಷ ಬಿಡುಗಡೆಯಾಗಿದೆ. 2 ವರ್ಷದಿಂದ ಈ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸಿಲ್ಲ ಎಂದು ಶಕುಂತಳಾ ಶೆಟ್ಟಿ ವಿಷಾದ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಸದಸ್ಯೆ ಜೊಹರಾ ನಿಸಾರ್, ಶಾಸಕರ ಆಪ್ತ ಕಾರ್ಯದರ್ಶಿ ಸುಧಾಕರ್ ರೈ, ಕಾಂಗ್ರೆಸ್ ಕಾರ್ಯಕರ್ತರಾದ ಚಂದ್ರಶೇಖರ್, ಮನಮೋಹನ್ ಇದ್ದರು.
--