ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಟ್ಲ ಠಾಣಾಧಿಕಾರಿ ಅಮಾನತು

Lingaraj Badiger
Updated On : 14 Jun 2013, 11:52 am

ಬಂಟ್ವಾಳ: ಯುವಕನೋರ್ವನ ನಾಪತ್ತೆ ಪ್ರಕರಣ ತನಿಖೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ವಿಟ್ಲ ಠಾಣಾಧಿಕಾರಿಯನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ವಿಟ್ಲಮೂಡ್ನೂರು ಗ್ರಾಮದ ಕಂಬಳಬೆಟ್ಟು ಶಾಂತಿನಗರ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಮಹಮ್ಮದ್ ಇಮ್ತಿಯಾಝ್ (22) ಎಂಬಾತ ಮೇ 7ರಂದು ನಾಪತ್ತೆಯಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಸಮರ್ಪಕ ತನಿಖೆ ನಡೆದಿಲ್ಲ ಎಂಬ ಕಾರಣಕ್ಕೆ ವಿಟ್ಲ ಠಾಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ನಾಪತ್ತೆ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಮೇ 27ರಂದು ಉಳ್ಳಾಲ ಠಾಣೆ ವ್ಯಾಪ್ತಿಯ ನೇತ್ರಾವತಿ ನದಿ ತೀರದಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು.
ಶವ ಇಮ್ತಿಯಾಜ್‌ನಂತೆ ಕಾಣುತ್ತಿದ್ದುದರಿಂದ ಸಂಶಯಗೊಂಡ ಮನೆಯವರು ಹಾಗೂ ಊರವರು ಗೊಂದಲ ಸೃಷ್ಟಿಸಿದ್ದರು. ಈ ನಡುವೆ, ನಾಪತ್ತೆ ಪ್ರಕರಣದಲ್ಲಿ ವಿಟ್ಲ ಠಾಣಾಧಿಕಾರಿ ಸರಿಯಾದ ಕ್ರಮದಲ್ಲಿ ತನಿಖೆ ನಡೆಸಿಲ್ಲ, ಆತನಲ್ಲಿ ಇತ್ತು ಎನ್ನಲಾದ 8 ಮೊಬೈಲ್ ಫೋನ್ ಸಿಮ್‌ಗಳನ್ನು ಟ್ರೇಸ್ ಮಾಡದೆ ನಿರ್ಲಕ್ಷಿಸಲಾಗಿದೆ ಎಂಬ ದೂರಿನನ್ವಯ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಅವರನ್ನು ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ ಎನ್ನಲಾಗಿದೆ.
ಮರಳಿ ಬಂದ ಇಮ್ತಿಯಾಝ್: ಇತ್ತ ಇಮ್ತಿಯಾಝ್ ಬುಧವಾರ ದಿಢೀರ್ ಪ್ರತ್ಯಕ್ಷನಾಗಿದ್ದಾನೆ. ಪ್ರಕರಣದ ಸಂಬಂಧ ಎಸ್ಸೈ ಮೇಲೆ ಕರ್ತವ್ಯ ನಿರ್ಲಕ್ಷ್ಯ ಆರೋಪ ಹೊರಿಸಿದ ಇಮ್ತಿಯಾಝ್ ಮನೆಯವರು ತಾವು ಆರೋಪ ಮಾಡಿರುವ ಬಗ್ಗೆ ಖೇದಗೊಂಡಿದ್ದಾರೆ. ಹಾಗಾಗಿ ಅಮಾನತು ಆದೇಶವನ್ನು ಎಸ್ಪಿ ಹಿಂತೆಗೆದುಕೊಳ್ಳುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement