ಸ್ಥಳ ಕೊರತೆ- ಪದವಿ ಕಾಲೇಜು ರದ್ದು ಸಾಧ್ಯತೆ; ಉಳಿಸಿಕೊಳ್ಳಲು ಮನವಿ
ಪುತ್ತೂರು: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಪುತ್ತೂರು ತಾಲೂಕಿನ ಕಾಣಿಯೂರಿಗೆ 3 ವರ್ಷಗಳ ಹಿಂದೆ ಮಂಜೂರಾಗಿರುವ ನ್ಯೂ ಮಾಡೆಲ್ ಪದವಿ ಕಾಲೇಜು ಸ್ಥಳದ ಸಮಸ್ಯೆಯಿಂದಾಗಿ ತಿರಸ್ಕೃತಗೊಳ್ಳುವ ಸಂಭವವಿದೆ. ಈ ಬಗ್ಗೆ ಸ್ಥಳೀಯ ಸ್ಥಳ ದಾನಿಗಳು ಅಥವಾ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕಾಲೇಜನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ಹಿರಿಯರಾದ ಸಿ.ಪಿ. ಜಯರಾಮ ಗೌಡ ಆಗ್ರಹಿಸಿದ್ದಾರೆ.
ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 3 ವರ್ಷಗಳಿಂದ ಕಾಣಿಯೂರಿನ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ನ್ಯೂ ಮಾಡೆಲ್ ಪದವಿ ಕಾಲೇಜು ನಡೆಯುತ್ತಿದೆ. ಪ್ರಾಂಶುಪಾಲರ ಸಹಿತ 5 ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. 100ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಕಾಲೇಜು ಕಟ್ಟಡ ನಿರ್ಮಾಣಕ್ಕೆ 1.5 ಕೋಟಿ ಮಂಜೂರು ಮಾಡಿದ್ದು, ಈ ಅನುದಾನ ಶಾಲಾ ಸಮಿತಿ ಖಾತೆಗೆ ಜಮಾ ಆಗಿದೆ. ಆದರೆ ಹಿಂದಿನ ಅವಧಿಯಲ್ಲಿ ರಾಜ್ಯ ಸರ್ಕಾರ ಒಪ್ಪಿಕೊಂಡಿರುವಂತೆ ಕಾಲೇಜು ನಿರ್ಮಾಣಕ್ಕೆ ಅಗತ್ಯ ಇರುವ ಕನಿಷ್ಠ 10 ಎಕರೆ ಜಮೀನನ್ನು ಒದಗಿಸಿಕೊಡಲು ವಿಫಲವಾಗಿರುವ ಕಾರಣ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಈ ಕಾಲೇಜು ಕಾಣಿಯೂರಿನಲ್ಲಿ ಮುಂದುವರಿಯುವುದಕ್ಕೆ ಅಡ್ಡಿಯಾಗಿದೆ. ಹಿಂದಿನ ಅವಧಿಯ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಈ ಸಮಸ್ಯೆಗೆ ಕಾರಣ ಎಂದು ಅವರು ಆರೋಪಿಸಿದರು.
ಕಾಣಿಯೂರು ಮತ್ತು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಶಿಕ್ಷಣಾಸಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಕೇಂದ್ರ ಸರ್ಕಾರದ ಈ ಯೋಜನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಣಿಯೂರಿನ ರಾಜರಸ್ತೆಯ ಬದಿಯಲ್ಲಿ 10 ಎಕರೆ ಸರ್ಕಾರಿ ಸ್ಥಳ ಅಥವಾ ಖಾಸಗಿ ಸ್ಥಳಗಳಿದ್ದಲ್ಲಿ, ಈ ಬಗ್ಗೆ ಸ್ಥಳೀಯರು ಮುಂದಿನ 15 ದಿನಗಳೊಳಗಾಗಿ ತನ್ನ ಗಮನಕ್ಕೆ ತಂದಲ್ಲಿ ತಕ್ಷಣವೇ ರಾಜ್ಯ ಸರ್ಕಾರದಿಂದ ಅಗತ್ಯ ಆದೇಶಗಳನ್ನು ಪಡೆದುಕೊಂಡು ಕಾಲೇಜು ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಅವರು ತಿಳಿಸಿದರು. ಯಾವುದೇ ಕಾರಣಕ್ಕೂ ಈ ಕಾಲೇಜನ್ನು ರದ್ದು ಪಡಿಸಲು ಸ್ಥಳೀಯರು ಅವಕಾಶ ನೀಡದಂತೆ ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳಾದ ನಿರ್ಮಲ್ ಕುಮಾರ್ ಜೈನ್ ಮತ್ತು ಶೀನಪ್ಪ ಗೌಡ ಬೈತಡ್ಕ ಇದ್ದರು.
ಕಾಣಿಯೂರಲ್ಲಿ ಕಾಲೇಜು ಉಳಿಸಿಕೊಳ್ಳಲು ಸೂಕ್ತ ಸ್ಥಳ ನೀಡಲು ಸಿದ್ಧ: ಆಚಾರ್
ಪುತ್ತೂರು: ಕೇಂದ್ರ ಸರ್ಕಾರದ ವತಿಯಿಂದ ಕಾಣಿಯೂರಿಗೆ ಮಂಜೂರಾಗಿರುವ ಕೇಂದ್ರ ಸರ್ಕಾರದ ಯೋಜನೆಯಾಗಿರುವ ನ್ಯೂ ಮಾಡೆಲ್ ಕಾಲೇಜು ಇದೀಗ ಅಲ್ಲಿ ಸ್ಥಳದ ಕೊರತೆಯಿಂದಾಗಿ ರದ್ದಾಗುವ ಸಂಭವವಿದೆ. ಈ ಕಾಲೇಜನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಳಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳಾವಕಾಶ ನೀಡಲು ಸಿದ್ಧರಿದ್ದೇವೆ ಎಂದು ಬೆಳಂದೂರು ನಿವಾಸಿ ನಿವೃತ್ತ ಶಿಕ್ಷಕ ಜಿ.ಎಸ್. ಆಚಾರ್ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಲೇಜಿಗೆ ಕಾಣಿಯೂರಿನಲ್ಲಿ ನಿರೀಕ್ಷಿತ ಸ್ಥಳವಿರುವುದಿಲ್ಲ ಎಂಬುದು ತಿಳಿದು ಬಂದಿದೆ. ಬೆಳಂದೂರು ಶಾಲೆಯ ಬಳಿಯಲ್ಲಿ 10 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಇಲ್ಲಿ ಕಾಲೇಜು ಸ್ಥಾಪನೆಗೆ ಸೂಕ್ತವಾಗಿದೆ. ಇಲ್ಲಿ ಕಾಲೇಜು ಕಟ್ಟಡ ನಿರ್ಮಿಸುವಂತೆ ಅವಕಾಶ ಕೋರಿ ಕಳೆದ ಜುಲೈನಲ್ಲಿ ಬೆಳಂದೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರವನ್ನು ಕೇಳಿಕೊಳ್ಳಲಾಗಿತ್ತು. ಆದರೆ ತಮ್ಮ ಮನವಿಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಿಂದುಳಿದ ಪ್ರದೇಶಕ್ಕೆ ಸಿಕ್ಕಿರುವ ಈ ಅವಕಾಶವನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಳಂದೂರಿನ ಸರ್ಕಾರಿ ಶಾಲೆಯ ಬಳಿಯಲ್ಲಿ ಇರುವ ಸ್ಥಳಾವಕಾಶದಲ್ಲಿ ಕಾಲೇಜು ಕಟ್ಟಡ ನಿರ್ಮಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಬೆಳಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಝೀರ್ ದೇವಸ್ಯ, ಮಾಜಿ ಅಧ್ಯಕ್ಷ ನಾಗೇಶ್, ಸ್ಥಳೀಯರಾದ ಸಂಪತ್ ಕುಮಾರ್, ವಿಠಲ ರೈ, ವಾಸುದೇವ ಆಚಾರ್ಯ ಇದ್ದರು.