ಹರಿಹರ ಶಾಲೆ ಮಕ್ಕಳ ಪಾಡು ಹರೋಹರ!
ಸುಬ್ರಹ್ಮಣ್ಯ: ಶಾಲೆ- ಕಾಲೇಜುಗಳು ಆರಂಭಗೊಂಡಿವೆ, ಪಾಠ ಕೇಳುವುದಕ್ಕೆ ಮಕ್ಕಳು ಸಿದ್ಧರಿದ್ದಾರೆ. ಆದರೆ ಕಲಿಸುವುದಕ್ಕೆ ಶಿಕ್ಷಕರೇ ಇಲ್ಲ!
ಇಂಥದೊಂದು ಗೋಳು ಹರಿಹರ ಪಲ್ಲತ್ತಡ್ಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಎದುರಾಗಿದೆ. ಶಿಕ್ಷಕರಿಲ್ಲದೆ ಮಕ್ಕಳು ಚಿಂತೆಯಲ್ಲಿ ಇದ್ದರೆ, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಇತ್ತ ಶಿಕ್ಷಕರೂ ಇಲ್ಲ, ಅತ್ತ ಗೋಳು ಕೇಳುವವರೂ ಇಲ್ಲ ಎಂಬ ಸ್ಥಿತಿ ಇಲ್ಲಿಯದು.
6 ಶಿಕ್ಷಕರ ಹುದ್ದೆ ಖಾಲಿ: ಶಾಲೆಯಲ್ಲಿ ಒಟ್ಟು 77 ಮಂದಿ ವಿದ್ಯಾರ್ಥಿಗಳಿದ್ದಾರೆ. ಶಾರೀಕ ಶಿಕ್ಷಣ ಶಿಕ್ಷಕರನ್ನು ಹೊರತುಪಡಿಸಿ ಉಳಿದ 6 ಅಧ್ಯಾಪಕರ ಹುದ್ದೆ ಖಾಲಿ ಇದೆ. ದ್ವಿತೀಯ ದರ್ಜೆ ಗುಮಾಸ್ತರ 2 ಹುದ್ದೆ ಹಾಗೂ ವೃತ್ತಿ (ಹೊಲಿಗೆ) ಹುದ್ದೆಗಳು ಖಾಲಿ ಬಿದ್ದಿವೆ. ಇರುವ ಶಾರೀರಿಕ ಶಿಕ್ಷಕರೊಬ್ಬರೇ ಎಲ್ಲ ಶಾಲೆಯ ಉಸ್ತುವಾರಿ ಹೊಣೆಯನ್ನು ಹೊರಬೇಕಿದೆ. ಉಳಿದಂತೆ ಬಹುತೇಕ 'ಇಲ್ಲ'ಗಳಿಂದ ಕೂಡಿದ ಈ ಶಾಲೆಯ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ತೂಗುಯ್ಯಾಲೆಯಲ್ಲಿ ಮಕ್ಕಳ ಭವಿಷ್ಯ: ಕೌತುಕದ ವಿಷಯವೆಂದರೆ, 2009ರಿಂದಲೇ ಈ ಶಾಲೆಯ ಕೆಲವು ಹುದ್ದೆಗಳು ಖಾಲಿಯಿವೆ. ನಂತರದ ದಿನಗಳಲ್ಲಿ ಇದ್ದ ಶಿಕ್ಷಕರು ಕೂಡ ವರ್ಗಾವಣೆ ಹಾಗೂ ನಿವೃತ್ತಿಗೊಂಡು ಶಿಕ್ಷಕರ ಸಂಖ್ಯೆ ಕ್ಷೀಣಿಸಿ ಸಮಸ್ಯೆ ಭಗಿಲೆದ್ದಿದೆ. ಗಣಿತ, ಹಿಂದಿ, ಕನ್ನಡ, ವಿಜ್ಞಾನ, ಕಲಾ ವಿಷಯ ಬೋಧನೆಗೆ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಅತಿಥಿ ಶಿಕ್ಷಕರ ನೆಲೆಯಲ್ಲಿ ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದು ತಾತ್ಕಾಲಿಕ. ಜೊತೆಗೆ ಕೊಲ್ಲಮೊಗ್ರು ಅನುದಾನಿತ ಪ್ರೌಢಶಾಲೆಯಿಂದ ಡೆಪ್ಯುಟೇಶನ್ ನೆಲೆಯಲ್ಲಿ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಪೂರ್ಣಾವಧಿಯ ಖಾಯಂ ಶಿಕ್ಷಕರ ನೇಮಕವಾಗದ ವಿನಾ ಸಮಸ್ಯೆ ಬಗೆಹರಿಯುವುದು ಕಷ್ಟ.
ನಾಳೆ ಪೋಷಕರ ಸಭೆ: ಈ ಭಾಗದ ಸುತ್ತಮುತ್ತಲಿನ ಪರಿಸರದ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಕೇಂದ್ರ ವಿದ್ಯಾರ್ಜನೆಗೆ ಪೂರಕ ಕೇಂದ್ರ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಇಲ್ಲೇ ಶಿಕ್ಷಣ ಪಡೆಯುವ ಅನಿವಾರ್ಯತೆ ಇರುವುದರಿಂದ ಅಸಮಾಧಾನಗೊಂಡಿರುವ ಪೋಷಕರು ಸಭೆ ಕರೆದು ಶಾಶ್ವತ ಪರಿಹಾರ ಕಂಡುಕೊಳ್ಳುವ ಯತ್ನದಲ್ಲಿದ್ದಾರೆ. ಅದರಂತೆ ಶನಿವಾರ ಸಭೆ ನಡೆಸಲು ನಿರ್ಧರಿಸಿದ್ದಾರೆ.