ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಇಲಾಖೆಗಳನ್ನು ಕುಣಿಸುವ ಸರ್ಕಾರಿ ಮರ್ಜಿ'

Lingaraj Badiger
Updated On : 15 Jun 2013, 12:12 pm

ಮಂಗಳೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಸ್ವಾಯತ್ತತೆ ನೀಡದಿರುವುದು ಮತ್ತು ಗ್ರಾಮೀಣಾಭಿವೃದ್ಧಿ ವಿಧೇಯಕ ಮಂಡಿಸಿರುವ ಕ್ರಮ ಇಲಾಖೆಗಳು ಸರ್ಕಾರದ ಮರ್ಜಿಗೆ ಕುಣಿಯುವಂತೆ ಮಾಡುವುದೇ ಆಗಿದೆ ಎಂದು ಶಾಸಕ, ರಾಜ್ಯ ಬಿಜೆಪಿ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದ್ದಾರೆ.
 ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ತಿದ್ದುಪಡಿ ಕಾನೂನನ್ನು ಹಿಂದಕ್ಕೆ ಪಡೆದು ಸಮಾಜಘಾತಕ ಶಕ್ತಿ ಬೆಳೆಯಲು ಸರ್ಕಾರ ಆಸ್ಪದ ನೀಡಿದೆ. ತನ್ನ ರಾಜಕೀಯ ಮರ್ಜಿಗೆ ಅನುಗುಣವಾಗಿ ವರ್ಗಾವಣಾ ನೀತಿ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು.
ಗ್ರಾಮೀಣಾಭಿವೃದ್ಧಿ ವಿಧೇಯಕವನ್ನು ತರಾತುರಿಯಲ್ಲಿ ಸದನದಲ್ಲಿ ಮಂಡಿಸಿದ್ದು, ಗ್ರಾಮ ಸಭೆ ನಡೆಯದಿದ್ದರೆ ಅಧ್ಯಕ್ಷ, ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಆರ್ಥಿಕ ಸ್ವಾಯತ್ತೆ ನೀಡದ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಸದಸ್ಯರನ್ನು ಅನರ್ಹಗೊಳಿಸುವ ವಿಧೇಯಕವನ್ನು ಹಿಂದಕ್ಕೆ ಪಡೆಯಬೇಕು. ಗ್ರಾಮ ಸಭೆ ಕರೆಯುವ ಅಧಿಕಾರವನ್ನು ಪಿಡಿಒಗೆ ನೀಡಬೇಕು ಎಂದು ಒತ್ತಾಯಿಸಿದರು.
ಚರ್ಚ್ ದಾಳಿ ಮರು ತನಿಖೆಗೆ ಸ್ವಾಗತ: ನಿಗಮ, ಮಂಡಳಿಯಂತೆ ಅಕಾಡೆಮಿಗಳ ರಾಜಿನಾಮೆಗೆ ರಾಜ್ಯ ಸರ್ಕಾರ ಮುಂದಾಗುವುದು ಸರಿಯಲ್ಲ. ಅಕಾಡೆಮಿಗಳಿಗೆ ರಾಜಕೀಯ ಬೆರೆಸಬಾರದು ಎಂದ ಸಿ.ಟಿ. ರವಿ, ಚರ್ಚ್ ದಾಳಿ ಮತ್ತೆ ತನಿಖೆಯಾಗುವಂತೆ ಸದಸನದಲ್ಲಿ ಶಾಸಕರೊಬ್ಬರು ಒತ್ತಾಯಿಸಿದ್ದಾರೆ. ಚರ್ಚ್ ದಾಳಿಯಲ್ಲಿ ಬಿಜೆಪಿ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿದೆ. ಇದರಲ್ಲಿ ತೃಪ್ತಿ ಇಲ್ಲದಿದ್ದರೆ ಮತ್ತೆ ತನಿಖೆ ನಡೆಸುವುದಾದರೆ ಅದನ್ನು ಸ್ವಾಗತಿಸುವುದಾಗಿ ಹೇಳಿದರು.
ತೃತೀಯ ರಂಗ ಯಶಸ್ಸಾಗದು: ದೇಶದಲ್ಲಿ ರಾಜಕೀಯ ಧ್ರುವೀಕರಣವಾಗುತ್ತಿದ್ದು, ತೃತೀಯರಂಗ ಯಶಸ್ವಿಯಾಗದು. ರಾಷ್ಟ್ರಹಿತ ದೃಷ್ಟಿಯಿಂದ ಇತರೆ ಪಕ್ಷಗಳು ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ ಬೆಂಬಲಿಸಬೇಕು ಎಂದರು.
 ಕೋಟಿಗಟ್ಟಲೆ ಹಗರಣ, ನಕ್ಸಲ್, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವ ಕೇಂದ್ರ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ. ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ನಾಯಕತ್ವ ವಹಿಸಲಿದ್ದಾರೆ ಎಂದರು.
ಸ್ಥಾನೀಯ ಸಮಿತಿ ಆಯ್ಕೆ: ಪಕ್ಷದ ಸ್ಥಾನೀಯ ಸಮಿತಿ ಆಯ್ಕೆ ಜೂ.15ರಿಂದ 25ರ ವರೆಗೆ ನಡೆಯಲಿದ್ದು, 25ರಿಂದ 30ರ ವರೆಗೆ ಮಂಡಲ ಸಮಿತಿ ರಚನೆ, ಜು.1ರಿಂದ 10ರ ವರೆಗೆ ಜಿಲ್ಲಾ ಸಮಿತಿ ಚುನಾವಣೆ ನಡೆಯುವುದು ಎಂದರು.
ಸಂಸದ, ರಾಜ್ಯ ಉಪಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಪಾಧ್ಯಕ್ಷರಾದ ನಿತಿನ್ ಕುಮಾರ್, ಉಮಾನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ದೇವದಾಸ್ ಹಾಜರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement