ದಂಪತಿ ಆತ್ಮಹತ್ಯೆ
ಸುಬ್ರಹ್ಮಣ್ಯ: ಮಕ್ಕಳಿಲ್ಲದ ಬೇಸರ ಹಾಗೂ ಸಾಂಸಾರಿಕ ಸಮಸ್ಯೆಗಳಿಂದ ನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜ ಸಮೀಪದ ಬಳ್ಪ ಗ್ರಾಮದ ಕಾರಿಜ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕಾರಿಜ ದೊಡ್ಡಣ ಗೌಡ ಪುತ್ರ ರವಿಪ್ರಕಾಶ್ (42) ಹಾಗೂ ನಾಗವೇಣಿ (38) ದಂಪತಿ ಮೃತರು.
ರವಿಪ್ರಕಾಶ್ ಸಂಜೆ ವೇಳೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದನ್ನು ಗಮನಿಸಿದ ಪತ್ನಿ ನಾಗವೇಣಿ, ಮನನೊಂದು ತೋಟದ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಾಂಸಾರಿಕ ತಾಪತ್ರಯ: ರವಿಪ್ರಕಾಶ್ಗೆ ಈ ಹಿಂದೆ ಒಂದು ಮದುವೆಯಾಗಿದ್ದು ಗಂಡ ಹೆಂಡಿರ ನಡುವೆ ವಿರಸ ಉಂಟಾಗಿ ನಾಗವೇಣಿಯನ್ನು ಎರಡನೇ ವಿವಾಹವಾಗಿದ್ದರು. ಮೊದಲ ಹೆಂಡತಿಗೆ ಮಗುವಿದ್ದು ಆಕೆ ತವರು ಮನೆಯಲ್ಲಿದ್ದಾರೆ. ವಿಚ್ಛೇದನ ಪ್ರಕರಣ ಕೋರ್ಟ್ ಮೆಟ್ಟಿಲೇರಿ ವಿಚಾರಣೆ ಹಂತದಲ್ಲಿತ್ತು, ಆ ಪ್ರಕರಣಕ್ಕೆ ಸಂಬಂಧಿಸಿ ಸದ್ಯದಲ್ಲೇ ವಿಚಾರಣೆಯೂ ನಡೆಯಲಿತ್ತು ಎನ್ನಲಾಗಿದೆ.
ಪ್ರಕರಣದಿಂದಲೂ ಜರ್ಝರಿತರಾಗಿ ಮನನೊಂದು ರವಿಪ್ರಕಾಶ್ ಆತ್ಮಹತ್ಯೆ ದಾರಿ ಹಿಡಿದಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ರವಿಪ್ರಕಾಶ್ಗೆ ವಿಪರೀತ ಕುಡಿತದ ಚಟವೂ ಇತ್ತು ಎಂದು ಅಕ್ಕಪಕ್ಕದವರು ತಿಳಿಸಿದ್ದಾರೆ. ರವಿಪ್ರಕಾಶ್ಗೆ ತಂದೆ, ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.