ಭೂಗತ ಪಾತಕಿ ನಿಖಿಲ್ ಶೆಟ್ಟಿ ಸೆರೆ
ಮಂಗಳೂರು: ಬೆಂಗಳೂರು ಚೆಮ್ಮನ್ನೂರ್ ಜುವೆಲ್ಲರಿ ದರೋಡೆ ಪ್ರಕರಣ ಆರೋಪಿ ಮತ್ತು ಮಂಗಳೂರಿನ ರೌಡಿ ವಾಮಂಜೂರು ರೋಹಿ ಕೊಲೆ ಸಂಚು ರೂವಾರಿ ನಿಖಿಲ್ ಶೆಟ್ಟಿಯನ್ನು ಇಂಟರ್ ಪೋಲ್ ಸಹಾಯದಿಂದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಭೂಗತ ಪಾತಕಿ ರವಿ ಪೂಜಾರಿ ಸಹಚರನಾಗಿರುವ ನಿಖಿಲ್ ಶೆಟ್ಟಿ ಕುರಿತು ದುಬೈ ಇಂಟರ್‌ಪೋಲ್‌ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಫೆ.28ರಂದು ಅಲ್ಲಿ ಬಂಧಿಸಿದ್ದರು. ನಿಖಿಲ್ ಶೆಟ್ಟಿ ವಿರುದ್ಧ ಭಾರತ ರೆಡ್‌ಕಾರ್ನರ್ ನೋಟಿಸ್ ಹೊರಡಿಸಿತ್ತು. ಸಿಸಿಬಿ ಇನ್‌ಸ್ಪೆಕ್ಟರ್ ಡಾ.ಎಚ್. ಎನ್.ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಲ್ಲಿ ಚೆಮ್ಮನ್ನೂರು ಜುವೆಲ್ಲರಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಿಖಿಲ್ ಪ್ರಕಾಶ್ ಶೆಟ್ಟಿ ಮುಖ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಈತ 2007ಕ್ಕೆ ದುಬೈಗೆ ತೆರಳಿ ತಲೆಮರೆಸಿಕೊಂಡಿದ್ದ.
ಬಳಿಕ ಮಂಗಳೂರಿನ ವಾಮಂಜೂರು ರೋಹಿ ಯಾನೆ ರೋಹಿದಾಸ ಶೆಟ್ಟಿ ಕೊಲೆಯಲ್ಲಿ ಹಂತಕರಿಗೆ ಆಯುಧ ನೀಡಿದ್ದು, ಕೊಲೆ ಸಂಚು ರೂಪಿಸಿದ ಆರೋಪವೂ ಈತನ ಮೇಲಿದೆ. 2012ರಲ್ಲಿ ನಿಖಿಲ್ ಶೆಟ್ಟಿ ತನ್ನ ಹೆಸರು ಬದಲಿಸಿ ನಿಶಿತ್ ಪ್ರಕಾಶ್ ಅರಸ ಎಂಬ ಹೆಸರಲ್ಲಿ ದುಬೈಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಸಂಗ್ರಹಿಸಿದ್ದರು.
ಈತ ಬೆಂಗಳೂರು ಪಾಸ್‌ಪೋರ್ಟ್ ಕಚೇರಿಯಿಂದ ನಿಶಿತ್ ಪ್ರಕಾಶ್ ಅರಸ್ ಹೆಸರಲ್ಲಿ ನಕಲಿ ವಿಳಾಸ ನೀಡಿ ದೃಢೀಕರಣ ಪತ್ರ ಪಡೆದ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ಈತನ ದುಬೈದಲ್ಲಿರುವ ಸ್ಪಾನ್ಸರ್ಸ್ ಹೆಸರು, ವಿಳಾಸ, ಮೊಬೈಲ್ ನಂಬ್ರಗಳನ್ನು ಕಲೆ ಹಾಕಿದರು. ಬಳಿಕ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರು. ಈತನ ಕುರಿತು ದುಬೈ ಇಂಟರ್‌ಪೋಲ್ ಪೊಲೀಸರಿಗೆ ನೀಡಲಾದ ಮಾಹಿತಿ ಆಧಾರದ ಮೇರೆಗೆ ದುಬೈ ಪೊಲೀಸರು ಬಂಧಿಸಿದ್ದರು. ಬಳಿಕ ನಿಖಿಲ್ ಶೆಟ್ಟಿಯನ್ನು ಗಡಿಪಾರು ಮಾಡಿದ್ದು, ಮಂಗಳೂರು ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ನಿಖಿಲ್ ಶೆಟ್ಟಿ ವಿಚಾರಣೆ ಬಳಿಕ ಭೂಗತ ಜಗತ್ತಿನ ಹತ್ಯೆಗಳ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬೀಳಲಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಈತನ ವಿರುದ್ಧ ಹಫ್ತಾ ವಸೂಲಿ, ಗುಂಡು ಹಾರಾಟ ಪ್ರಕರಣವೂ ದಾಖಲಾಗಿದೆ. ಬಲ್ಮಠ ಸೋಜಾ ಎಲೆಕ್ಟ್ರಾನಿಕ್ಸ್ ಪಾಲುದಾರ ರಿಚರ್ಡ್ ಪಿಂಟೊ ಎಂಬವರಿಗೆ ಗುಂಡು ಹಾರಿಸಿದ ಪ್ರಕರಣ, ವಿಟ್ಲದಲ್ಲಿ ಶಸ್ತ್ರಾಸ್ತ್ರ ಸಾಗಾಟ ಪ್ರಕರಣದಲ್ಲಿ ಈತ ಆರೋಪಿ. ಕಾರ್ಯಾಚರಣೆ ತಂಡದಲ್ಲಿ ಸಬ್‌ಇನ್‌ಸ್ಪೆಕ್ಟರ್ ಶ್ಯಾಮ ಸುಂದರ್, ಶಶಿಧರ ಶೆಟ್ಟಿ, ಗಣೇಶ್ ಕಲ್ಲಡ್ಕ, ಚಂದ್ರಶೇಖರ, ಗಣೇಶ್ ಎಂ.ಸಿ. ಸಹಕರಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಮುತ್ತುರಾಯ, ಡಿಸಿಪಿ ಧರ್ಮಯ್ಯ, ಇನ್‌ಸ್ಪೆಕ್ಟರ್ ಡಾ.ಎಚ್.ಎನ್. ವೆಂಕಟೇಶ್ ಪ್ರಸನ್ನ ಇದ್ದರು.