ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಮುದ್ರದಲ್ಲಿ ಮೃತದೇಹ ಪತ್ತೆ

Lingaraj Badiger
Updated On : 15 Jun 2013, 12:08 pm

ಕಾಪು:  ಮಂಗಳೂರಿನ ನೀರುಮಾರ್ಗ ಆಟೋ ಚಾಲಕ ಶ್ರೀಧರ ಪೂಜಾರಿ (40) ಎಂಬವರ ಮೃತದೇಹ ಇಲ್ಲಿನ ಮೂಳೂರು ಪಡು ಎಂಬಲ್ಲಿ ಸಮುದ್ರ ತಟದಲ್ಲಿ ಶುಕ್ರವಾರ ಪತ್ತೆಯಾಗಿದೆ. ಮೃತದೇಹ ಶುಕ್ರವಾರ ಸಮುದ್ರದಲ್ಲಿ ತೇಲಿ ಬಂದಿದ್ದು, ಕಾಪುವಿನ ಆಪತ್ಬಾಂಧವ ಎಂದೇ ಖ್ಯಾತಿ ಪಡೆದ ಸುರೇಶ್ ಶೆಟ್ಟಿ ಯಾನೆ ಸೂರಿ  ಸ್ಥಳಕ್ಕಾಗಮಿಸಿ ಶವವನ್ನು ದಡಕ್ಕೆ ಎಳೆದು ತಂದಿದ್ದರು. ಶವ ಸಂಪೂರ್ಣ ಕೊಳೆತಿದ್ದು, ಒಂದೆರಡು ದಿನಗಳ ಹಿಂದೆ ಹೊಳೆಗೆ ಅಥವಾ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.  ಶ್ರೀಧರ ಪೂಜಾರಿ ತೀವ್ರ ಆರ್ಥಿಕ ತೊಂದರೆಯಲ್ಲಿದ್ದು, ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ. ಕಾಪು ಠಾಣಾಧಿಕಾರಿ ಅರ್ಚನಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವದ ಮಹಜರು ನಡೆಸಿದರು. ಕಾಪು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ರೈ, ಸದಸ್ಯರಾದ ದಿನೇಶ್, ತಾ.ಪಂ. ಸದಸ್ಯೆ ಶಾಂಭವಿ ಕುಲಾಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬಸ್ ಡಿಕ್ಕಿ: ಬೈಕ್ ಸವಾರ ಸಾವು
ಮಂಗಳೂರು:  ಪಡೀಲ್ ಬಳಿ ಬಸ್ ಡಿಕ್ಕಿಯಾಗಿ ಬೈಕ್  ಸವಾರ ದುರ್ಗೇಶ್ ಮೃತಪಟ್ಟಿದ್ದಾರೆ.  ಶುಕ್ರವಾರ ಸಂಜೆ ಮಂಗಳೂರಿಂದ ಅಡ್ಯಾರ್ ಕಣ್ಣೂರಿಗೆ ತೆರಳುತ್ತಿದ್ದ 11 ನಂಬರ್ ಸಿಟಿ ಬಸ್ ಬೈಕ್ ಗೆ ಡಿಕ್ಕಿ ಹೊಡೆಯಿತು. ಇದೇ ವೇಳೆಗೆ ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ದುರ್ಗೇಶ್ ಮೃತಪಟ್ಟರು.   ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಬೊಕ್ಕಪಟ್ಣದ ಕಾರ್ತಿಕ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.  

ತಂದೆಗೆ ಸರಳಿನಿಂದ ಮಗ ಹಲ್ಲೆ
ಕಾರ್ಕಳ: ಆಸ್ತಿ ಪಾಲು ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆಗೆ ಸರಳಿನಿಂದ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಹಡ್ಯಾಲು ಎಂಬದಲ್ಲಿ ಗುರುವಾರ ರಾತ್ರಿ ನಡೆದಿದೆ.  ಹಡ್ಯಾಲು ನಿವಾಸಿ ಸುಂದರ ಪೂಜಾರಿ (77) ಎಂಬವರ ಮಗ ಸದಾನಂದ ಹಲ್ಲೆ ಆರೋಪಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಸದಾನಂದ ತನ್ನ ಸಹೋದರಿ ಜಾನಕಿ ಎಂಬವರಿಗೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ದೂರಲಾಗಿದೆ.

ಯುವತಿ ಕೊಲೆ; ಮತ್ತೊಬ್ಬ ಆರೋಪಿ ಸೆರೆ
ಕಾರ್ಕಳ: ರೆಂಜಾಳ ಯುವತಿ ಪೂರ್ಣಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಶುಕ್ರವಾರ ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.  ಮೂಡುಬಿದಿರೆ ಹೊಸಬೆಟ್ಟು ನಿವಾಸಿ ಸುಧಾಕರ್ ಶೆಟ್ಟಿ ಆಲಿಯಾಸ್ ಕೆಂಚ(29) ಬಂಧಿತ.  ಕಾರ್ಕಳದ ಅನಂತಶಯನದ ಬಳಿ ಈತನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜೂ.3 ರಂದು ಪೂರ್ಣಿಮಾಳ ಪ್ರಿಯಕರ ಪ್ರಭಾಕರ ಮೂಡುಬಿದಿರೆಯಲ್ಲಿರುವ ತನ್ನ ಅಂಗಡಿಗೆ ಕರೆಸಿಕೊಂಡು ಕೊಂದಿದ್ದಾಗಿ ಆರೋಪಿಸಲಾಗಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾಕರ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಭಾಗಿಯಾಗಿದ್ದ ಸುಧಾಕರ್ ಶೆಟ್ಟಿ ತಲೆ ಮರೆಸಿಕೊಂಡಿದ್ದ.

ಬಸ್ ಡಿಕ್ಕಿ: ಒಮ್ನಿ ಚಾಲಕ ಗಾಯ
ಮಂಗಳೂರು: ವೆಲೆನ್ಸಿಯಾ ಬಳಿ ಬಸ್ ಡಿಕ್ಕಿಯಾಗಿ ಒಮ್ನಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.  ಶುಕ್ರವಾರ ಮಧ್ಯಾಹ್ನ ಜಲ್ಲಿಗುಡ್ಡೆಯತ್ತ ತೆರಳುತ್ತಿದ್ದ 11 ನಂಬರ್  ಸಿಟಿಬಸ್ ಎದುರುಗಡೆಯಿಂದ ಬರುತ್ತಿದ್ದ ಒಮ್ನಿಕಾರಿಗೆ ಡಿಕ್ಕಿ ಹೊಡೆಯಿತು. ಕಾರ್ ಒಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಹೊರಗೆಳೆಯಲು ಜನರು ಶ್ರಮಿಸಿದರು. ಚಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿ ಗಫೂರ್ ಕೊಲೆಯತ್ನ
ಪುತ್ತನ ಹತ್ಯೆಗೆ ಪ್ರತೀಕಾರ
ಮಂಗಳೂರು: ಕಣ್ಣೂರು ಚೆರಿಯಪುತ್ತ ಕೊಲೆ ಪ್ರಕರಣ ಆರೋಪಿ ರೌಡಿ ಗಫೂರ್ ಮೇಲೆ ಗುರುವಾರ ರಾತ್ರಿ ಅಡ್ಯಾರಲ್ಲಿ 9 ಮಂದಿಯ ತಂಡ ತಲವಾರ್‌ಗಳಿಂದ ಕಡಿದು ಕೊಲೆಗೆ ಯತ್ನಿಸಿದೆ.  ಚೆರಿಯಪುತ್ತನನ್ನು ವರ್ಷದ ಹಿಂದೆ ಕಣ್ಣೂರು ಆಟದ ಮೈದಾನ ಬಳಿ ಅಟ್ಟಾಡಿಸಿ ತಲವಾರ್‌ಗಳಿಂದ ಕಡಿದು ಕೊಲೆ ಮಾಡಿದ್ದರು.  ಗುರುವಾರ ರಾತ್ರಿ ಗಫೂರ್ ಅಡ್ಯಾರಿನಲ್ಲಿ ಸಹ್ಯಾದ್ರಿ ಕಾಲೇಜಿನ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮೂರು ಬೈಕ್‌ನಲ್ಲಿ ಬಂದ 9 ಮಂದಿ ದುಷ್ಕರ್ಮಿಗಳು ತಲವಾರ್ ಝಳಪಿಸಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳಿಂದ ಜೀವ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿಕ್‌ಪಾಕೆಟ್ ಕಳ್ಳಗೆ ಗೂಸಾ
ಮಂಗಳೂರು: ಕೇರಳ ಬಸ್‌ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನನ್ನು ತೊಕ್ಕೊಟ್ಟು ಜಂಕ್ಷನ್‌ನನಲ್ಲಿ ಇಳಿಸಿ ಹಲ್ಲೆ ನಡೆಸಿದ್ದಾರೆ.  ಕೇರಳ ಮನ್ನಾರ್‌ಕಾಡ್ ನಿವಾಸಿ ಮಹಮ್ಮದ್ ಅಲಿ ಏಟು ತಿಂದವ. ಗುರುವಾರ ಘಟನೆ ನಡೆದಿದೆ. ಆರೋಪಿಯನ್ನು ಉಳ್ಳಾಲ ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ್ದಾರೆ. ತನ ಜತೆಗಾರ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಸಬ್‌ರಿಜಸ್ಟ್ರಾರ್ ಕಚೇರಿಯಿಂದ ಕಳವು
ಮಂಗಳೂರು:  ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸಬ್‌ರಿಜಿಸ್ಟ್ರಾರ್ ಕಚೇರಿಗೆ ನುಗ್ಗಿದ ಕಳ್ಳರು ಕಡತಗಳನ್ನು ಚೆಲ್ಲಾಡಿ, ನಗದು ಕಳವು ಮಾಡಿದ್ದಾರೆ.  ಗುರುವಾರ ತಡರಾತ್ರಿ ಕಳ್ಳರು ಒಳ ನುಗ್ಗಿದ್ದು,  ಕಪಾಟು ಒಡೆದು, ಲಾಕರ್‌ನಲ್ಲಿ ಮುದ್ರಾಂಕ ಶುಲ್ಕ 68,380 ಕಳವು ಮಾಡಿದ್ದಾರೆ.  ಶುಕ್ರವಾರ ಬೆಳಗ್ಗೆ ಕಚೇರಿಗೆ ಆಗಮಿಸಿದ ಗುಮಾಸ್ತ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಬೆರಳಚ್ಚು ತಜ್ಞರು ಮತ್ತು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸೀನಿಯರ್ ಸಬ್ ರಿಜಿಸ್ಟ್ರಾರ್ ವಿಕ್ರಮ್ ಕೆ. ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.  ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜೆ.ಆರ್.ಲೋಬೊ, ಕಚೇರಿಗೆ ರಾತ್ರಿ ಪಾಳಯದಲ್ಲಿ ಕಾವಲುಗಾರರನ್ನು ನೇಮಿಸಲಾಗುವುದು. ಸಾರ್ವಜನಿಕರ ಅಮೂಲ್ಯ ಆಸ್ತಿ, ದಾಖಲೆಗಳು ಇಲ್ಲಿಯೇ ಇರುವುದರಿಂದ ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗುವುದು.  ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement