ಸುಳ್ಯ: ಭಾರಿ ಗಾಳಿ, ಮಳೆಗೆ ಸಂಚಾರ ವ್ಯತ್ಯಯ
ಸುಳ್ಯ: ಕೆಲ ದಿನಗಳಿಂದ ಸುಳ್ಯ ಹಾಗೂ ಆಸುಪಾಸಿನಲ್ಲಿ ಭಾರಿ ಮಳೆ ಮತ್ತು ಗಾಳಿಗೆ ರಸ್ತೆ ಬದಿಯ ಮರಗಳು ಉರುಳಿ ಬಿದ್ದು ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿವೆ.
ಗುರುವಾರ ಎಲಿಮಲೆ ಸಮೀಪದ ಜೀರ್ಮುಕಿಯಲ್ಲಿ ಗೇರು ಮರ ಉರುಳಿ ಬಿದ್ದು ವಿದ್ಯುತ್ ಲೈನ್ಗೆ ಹಾನಿಯಾಗಿದೆ.
ಮೂರು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಇವುಗಳೊಂದಿಗೆ ಮರಗಳು ರಸ್ತೆಗೆ ಉರುಳಿದ ಪರಿಣಾಮ ಆ ಭಾಗದ ಸಂಚಾರಕ್ಕೂ ಅಡ್ಡಿಯುಂಟಾಯಿತು.
ರಸ್ತೆ ಸಂಚಾರ ವ್ಯತ್ಯಯ: ಗುತ್ತಿಗಾರು ಸಮೀಪದ ಬಾಕಿಲ ಎಂಬಲ್ಲಿ ರಸ್ತೆ ಬದಿಯ ಬೃಹತ್ ಮರವೊಂದು ಶುಕ್ರವಾರ ಮುಂಜಾನೆ ಉರುಳಿ ಬಿದ್ದ ಪರಿಣಾಮವಾಗಿ ನಾಲ್ಕು ತಾಸುಗಳಿಗೂ ಅಧಿಕ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು.
ಸುಳ್ಯಕ್ಕೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಇದರಿಂದ ತೊಂದರೆ ಅನುಭವಿಸಿದರು.
ಸುಳ್ಯ ಪೊಲೀಸ್ ಠಾಣೆ ಎದುರಿಗಿದ್ದ ಮರವೊಂದು ಠಾಣೆಯ ಛಾವಣಿ ಮೇಲೆ ಮುರಿದು ಬಿದ್ದು ಹಂಚುಗಳಿಗೆ ಹಾನಿಯಾಗಿದೆ.
ಕುಸಿತದ ಭೀತಿಯಲ್ಲಿ ರಸ್ತೆ: ಮಾಣಿ- ಮೈಸೂರು ರಾಜ್ಯ ಹೆದ್ದಾರಿ ಅಗಲೀಕರಣದ ಭಾಗವಾಗಿ ಸಂಪಾಜೆ ಗ್ರಾಮದ ಕಡಪಾಲ ಎಂಬಲ್ಲಿ ನೂತನ ಸೇತುವೆ ನಿರ್ಮಾಣದ ಉದ್ದೇಶಕ್ಕಾಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ರಸ್ತೆಯು ಭಾರಿ ಮಳೆಗೆ ಮುಳುಗುವ ಹಂತಕ್ಕೆ ತಲುಪಿದ್ದು, ಪಕ್ಕದಲ್ಲಿರುವ ಕೃಷ್ಣ ಎಂಬವರ ಮನೆಯ ಅಂಗಳದವರೆಗೂ ನೀರು ನಿಂತಿದೆ.
ಕೇವಲ ಐದು ಪೈಪ್ಗಳನ್ನು ಹಾಕಿ ಅದರೆ ಮೇಲೆ ಮಣ್ಣಿನ ರಸ್ತೆ ನಿರ್ಮಿಸಲಾಗಿದ್ದು, ನೀರು ರಭಸವಾಗಿ ಹರಿಯುವುದರಿಂದ ಈ ಪೈಪ್ಗಳು ಲೆಕ್ಕಕ್ಕಿಲ್ಲದಂತೆ ಆಗಿವೆ.
--
ಗಾಳಿ ಮಳೆ: ಮರ ಬಿದ್ದು ಸಂಚಾರಕ್ಕೆ ಅಡ್ಡಿ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕರಾಯ ಗ್ರಾಮದ ಪೂಂಜಾಳ ಎಂಬಲ್ಲಿ ಶುಕ್ರವಾರ ಗಾಳಿ ಮಳೆಗೆ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಗೆ ಮರ ಬಿದ್ದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಯಿತು. ಬಿದ್ದ ಮರವನ್ನು ಸ್ಥಳೀಯರು ಪಂಚಾಯಿತಿ ಸಹಕಾರದೊಂದಿಗೆ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.