ಹಿರಿಯರ ನಿಂದಿಸುವುದರಲ್ಲಿ ಮನೆಯವರ ಪಾಲು ಶೇ.83!
ಮಂಗಳೂರು: ಭಾರತದಲ್ಲಿ ಹಿರಿಯರಿಗೆ ಅಗೌರವ ತೋರಿಸುವವರಲ್ಲಿ ಮನೆಯವರಿಗೆ ಸಿಂಹಪಾಲು. ಹಿರಿಯರನ್ನು ನಿಂದಿಸುವವರಲ್ಲಿ ಶೇ.39 ಮಂದಿ ಸೊಸೆಯಂದಿರು, ಶೇ.38 ಮಂದಿ ಗಂಡುಮಕ್ಕಳು!
ಹೆಲ್ಪ್ಏಜ್ ಇಂಡಿಯಾ ವತಿಯಿಂದ ಜನರ ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.83 ಮಂದಿ ಹಿರಿಯರು ಮನೆಯವರಿಂದಲೇ ಕಿರುಕುಳ ಅನುಭವಿಸುತ್ತಾರೆ ಎಂಬ ಮಾಹಿತಿ ಹೊರಗೆಡಹಿದೆ.
ಶುಕ್ರವಾರ ರೋಶನಿ ನಿಲಯ ಸಮಾಜಕಾರ್ಯ ಕಾಲೇಜಿನಲ್ಲಿ 'ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನಾಚರಣೆ' ಸಂದರ್ಭ ರಾಷ್ಟ್ರೀಯ ಸಮೀಕ್ಷೆ ಪುಸ್ತಕ ಬಿಡುಗಡೆಗೊಳಿಸಿದ ಸಂಘಟಕಿ ರೇಖಾಮೂರ್ತಿ ಈ ವಿವರ ನೀಡಿದರು.
ಹೆಲ್ಪ್ ಏಜ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ 20 ರಾಜ್ಯಗಳ 24 ನಗರಗಳಲ್ಲಿ ಸಮೀಕ್ಷೆ ನಡೆಸಿತ್ತು. ಹಿರಿಯರಿಗೆ ನಿಂದಿಸುವ ಪ್ರಕರಣದಲ್ಲಿ ದೇಶದ ನಗರಗಳಲ್ಲಿ ಬೆಂಗಳೂರು 7ನೇ ಸ್ಥಾನ, ಮಂಗಳೂರು 13ನೇ ಸ್ಥಾನ, ಮಧುರೈ ಮೊದಲ ಸ್ಥಾನದಲ್ಲಿದೆ. ಹಿರಿಯರಿಗೆ ನಿಂದಿಸಿದ ಪ್ರಕರಣಗಳು ಮಧುರೈಯಲ್ಲಿ ಶೇ.63, ಕಾನ್ಪುರದಲ್ಲಿ ಶೇ.60 ದಾಖಲಾಗುವ ಮೂಲಕ ಮುಂಚೂಣಿಯಲ್ಲಿವೆ. ಜಮ್ಮು ಕಾಶ್ಮೀರ ಮತ್ತು ರಾಜಸ್ತಾನದಲ್ಲಿ ಹಿರಿಯರಿಗೆ ನಿಂದಿಸಿದರೂ ಯಾವುದೇ ಪ್ರಕರಣಗಳು ದಾಖಲಾಗುವುದಿಲ್ಲ. ಆದರೆ ಮಂಗಳೂರು ಮತ್ತು ಮುಂಬಯಿಯಲ್ಲಿ ಜಾಗೃತಿ ಇರುವುದರಿಂದ ಹಿರಿಯರಿಗೆ ನಿಂದಿಸಿದ ಪೈಕಿ ಶೇ.50 ಪ್ರಕರಣಗಳು ದಾಖಲಾಗುತ್ತವೆ.
ಹಿರಿಯರ ನಿಂದನೆಗೆ ಪ್ರಮುಖ ಕಾರಣ ಹಣಕಾಸು ವ್ಯವಹಾರಕ್ಕೆ ಮಕ್ಕಳನ್ನು ಅವಲಂಬಿಸಿರುವುದು ಮತ್ತು ಹೊಂದಾಣಿಕೆ ಕೊರತೆ. ಹೆಚ್ಚಿನ ಹಿರಿಯರು ಮಕ್ಕಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ, ಬಾಯಿ ಮಾತಿನ ಮೂಲಕ ನಿಂದಿಸುತ್ತಾರೆ ಎಂದು ದೂರುತ್ತಾರೆ. ಶೇ.35 ಮಂದಿ ಹಿರಿಯರು ನಿತ್ಯ ನಿಂದನೆಗೆ ಒಳಗಾಗುತ್ತಿದ್ದಾರೆ. ಶೇ.89 ಮಂದಿಗೆ ಹೆತ್ತವರ ಕಲ್ಯಾಣ ಕಾಯ್ದೆ ಬಗ್ಗೆ ಅರಿವೇ ಇಲ್ಲ ಎಂದರು.
ಶೇ.70 ಪ್ರಕರಣಗಳು ಪೊಲೀಸ್ ಹೆಲ್ಪ್ ಲೈನ್ ಮೂಲಕ ಬೆಳಕಿಗೆ ಬಂದಿವೆ. ಶೇ.17.67 ಪ್ರಕರಣಗಳು ಹೆಲ್ಪ್ ಏಜ್ ಇಂಡಿಯಾ ಹೊರ ಹಾಕಿದೆ, ಹಿರಿಯ ನಾಗರಿಕರ ಹೆಲ್ಪ್ಲೈನ್ ಮೂಲಕ ಶೇ.11 ಪ್ರಕರಣ ದಾಖಲಾಗಿವೆ ಎಂದರು.
ಎಸ್ಪಿ ಅಭಿಷೇಕ್ ಗೋಯಲ್ ಮಾತನಾಡಿ, ಹಿರಿಯರು ತಮ್ಮ ಮಗ ಹೇಳಿದ್ದು ಕೇಳುವುದಿಲ್ಲ, ಕಿರುಕುಳ ನೀಡುತ್ತಾನೆ ಅವನ ವಿರುದ್ಧ ಪ್ರಕರಣ ದಾಖಲಿಸಬೇಡಿ, ಕರೆದು ಎಚ್ಚರಿಸಿ ಎಂದು ಹೇಳುತ್ತಾರೆ. ನಾವು ಎಚ್ಚರಿಸುತ್ತೇವೆ. ಮೇಲುನೋಟಕ್ಕೆ ಎರಡೂ ಕಡೆಯವರು ಪೊಲೀಸ್ ಮುಂದೆ ಸರಿ ಆಗುತ್ತೇವೆ ಎಂದು ಹೇಳುತ್ತಾರೆ. ಆದರೆ ಸಮಸ್ಯೆ ಮೂಲ ಹೊಂದಾಣಿಕೆ ಕೊರತೆ, ಅದು ಹಾಗೆಯೇ ಉಳಿದಿರುತ್ತದೆ, ಕೊನೆಗೆ ಇರಿತ, ಹಲ್ಲೆ ಪ್ರಕರಣಗಳು ದಾಖಲಾಗಿ ಸಂಬಂಧವೇ ಹಾಳಾಗಿ ಬಿಡುತ್ತವೆ. ಕೌಟುಂಬಿಕ ವಾತಾವರಣದಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದ ಸಂಬಂಧ ಮತ್ತಷ್ಟು ಕೆಡುತ್ತದೆ. ಇಂಥ ವಿಚಾರಗಳಲ್ಲಿ ಪರಸ್ಪರ ಮಾತುಕತೆ, ಆಪ್ತ ಸಲಹೆಯಿಂದ ಸಂಬಂಧ ಸುಧಾರಿಸುತ್ತದೆ ಎಂದು ಸಲಹೆ ಮಾಡಿದರು. ಪೊಲೀಸ್ ಇಲಾಖೆ ಸಹಾಯ ಮಾಡಲು ಸದಾ ಸಿದ್ಧವಾಗಿದೆ. ಸ್ವಯಂ ಸೇವಾ ಸಂಸ್ಥೆಗಳಿಗೂ ನೆರವು ನೀಡಲು ಸದಾ ಸನ್ನದ್ಧರಾಗಿದ್ದೇವೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶಕುಂತಳಾ, ವಿಶ್ವಾಸ ಟ್ರಸ್ಟ್ ನಿರ್ದೇಶಕಿ ಡಾ.ಒಲಿಂಡಾ ಪಿರೇರಾ, ರೋಶನಿ ನಿಲಯ ಸಮಾಜಕಾರ್ಯ ಕಾಲೇಜು ಪ್ರಾಂಶುಪಾಲೆ ಡಾ.ಸೋಫಿಯಾ ಎನ್.ಫರ್ನಾಡಿಸ್, ಭ.ಸಿಲ್ವಿಯಾ ಫರ್ನಾಂಡಿಸ್, ಅಭಯಾಶ್ರಮ ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ಇದ್ದರು.