ಎಂಡೋ ಪರಿಹಾರ ನಿಧಿಗೆ ವಿವಿಯಿಂದ ರು. 5.87 ಲಕ್ಷ: ಶಿವಶಂಕರಮೂರ್ತಿ
ಮಂಗಳೂರು: ಎಂಡೋಸಲ್ಫಾನ್ ಪರಿಹಾರ ನಿಧಿಗಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಒಂದು ದಿನದ ಸಂಬಳ ಸಂಗ್ರಹಿಸಿ, ಒಟ್ಟು ರು. 5,87,892 ಮೊತ್ತವನ್ನು ಜಿಲ್ಲಾಧಿಕಾರಿಗೆ ಚೆಕ್ ಮೂಲಕ ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಹೇಳಿದ್ದಾರೆ.
ಶನಿವಾರ ಮಂಗಳೂರು ವಿವಿ ಹೊಸ ಸೆನೆಟ್ ಸಭಾಂಗಣದಲ್ಲಿ ನಡೆದ 2013-14ನೇ ಸಾಲಿನ ಶೈಕ್ಷಣಿಕ ಮಂಡಳಿಯ ಪ್ರಥಮ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಡಿಕೇರಿ ಕಾರ್ಯಪ್ಪ ವಿಶ್ವವಿದ್ಯಾಲಯ ಕಾಲೇಜು, ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜು, ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಒಂದು ದಿನದ ಸಂಬಳವನ್ನು ಉದಾರವಾಗಿ ನೀಡಿದ್ದಾರೆ ಎಂದರು.
ಸರ್ಕಾರದ ಆದೇಶದಂತೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಕಾಲವನ್ನು ಜಾರಿಗೊಳಿಸಲಾಗಿದ್ದು, ವಿದ್ಯಾಲಯದ ವಿವಿಧ ಸೇವೆಗಳನ್ನು ಕಾಲಮಿತಿಯೊಳಗೆ ಸಾರ್ವಜನಿಕರಿಗೆ ಒದಗಿಸುವ ಸೇವೆಗಳ ಪಟ್ಟಿ ಲಗತ್ತಿಸಲಾಗಿದೆ. ವಿದ್ಯಾರ್ಥಿಗಳ ಗಮನಕ್ಕಾಗಿ ಕಾಲೇಜು ಆವರಣದಲ್ಲಿ ಬೋರ್ಡ್ನಲ್ಲಿ ಲಗತ್ತಿಸಲಾಗಿದೆ. ಇದರಲ್ಲಿ ಪಡೆಯಬೇಕಾದ ದಾಖಲೆ, ಸಲ್ಲಿಸಬೇಕಾದ ವಿಧಾನ, ಅಧಿಕಾರಿ ಹಾಗೂ ಕಾಲಮಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಸರ್ಕಾರ 2013ನೇ ಸಾಲಿನಲ್ಲಿ ರು. 3.70 ಕೋಟಿ ಅನುದಾನ ಬಿಡುಗೊಳಿಸಿದೆ. ಇದರಲ್ಲಿ ಮಹಿಳೆಯರಿಗಾಗಿ ಹಾಗೂ ಪುರುಷರಿಗಾಗಿ ಪ್ರತ್ಯೇಕ ವಸತಿ ನಿಲಯ ನಿರ್ಮಿಸಲಾಗುವುದು. ಕಾಮಗಾರಿ ಪ್ರಾರಂಭಗೊಂಡಿದ್ದು, 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಕೌನ್ಸೆಲಿಂಗ್ ಮತ್ತು ಪ್ರವೇಶ: ಜು. 15- ವಿಜ್ಞಾನ ವಿಭಾಗ, ಜು. 16- ಕಲಾವಿಭಾಗ, ವಾಣಿಜ್ಯ ವಿಭಾಗ- ಜು. 17ಕ್ಕೆ, ಬೆಳಗ್ಗೆ 10ಕ್ಕೆ ನಡೆಯಲಿದೆ. ಸರ್ಕಾರಿ ಕೋಟಾದಡಿ ಅರ್ಜಿ ಸಲ್ಲಿಸಿರುವ ವಿದಾರ್ಥಿಗಳಿಗೆ ಜು. 19 ರಂದು ಕೌನ್ಸೆಲಿಂಗ್ ಮತ್ತು ಪ್ರವೇಶಾತಿ ನಡೆಯಲಿದೆ.
ಜೂ. 17, 18, 19 ರಂದು ಎಲ್ಲ ಕಾಲೇಜುಗಳಲ್ಲಿ ಅಂಕಪಟ್ಟಿ ದೊರಯಲಿದ್ದು, ಅಗತ್ಯವಿದ್ದಲ್ಲಿ ವೆಬ್ಸೈಟ್ನಲ್ಲಿರುವ ಅಂಕದ ಮಾಹಿತಿಯನ್ನು ಪಡೆದು ಕಳುಹಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕುಲಪತಿ ಸೂಚಿಸಿದ್ದಾರೆ.
25 ನೇ ಸ್ಥಾನ: ದೇಶದ 674 ವಿಶ್ವವಿದ್ಯಾಲಯಗಳಲ್ಲಿ ಉನ್ನತ ಸ್ಥಾನದಲ್ಲಿರುವ 50 ವಿಶ್ವವಿದ್ಯಾಲಯದಲ್ಲಿ ಮಂಗಳೂರು ವಿಶ್ವವಿದ್ಯಾಲಯವು 25ನೇ ಸ್ಥಾನ ಪಡೆದಿದೆ ಎಂದು ಕುಲಪತಿ ಶಿವಶಂಕರಮೂರ್ತಿ ತಿಳಿಸಿದ್ದಾರೆ.
ಕುಲಸಚಿವರಾದ ಪಿ.ಎಸ್. ಯಡಪಡಿತ್ತಾಯ, ಬಿ. ನಾರಾಯಣ, ಹಣಕಾಸು ಅಧಿಕಾರಿ ಪಕೀರಪ್ಪ ಇದ್ದರು.