ಕಡಲ್ಕೊರೆತ ತಡೆಗೆ ತಾತ್ಕಾಲಿಕ ಕಾಮಗಾರಿಗೆ ಖಾದರ್ ಸೂಚನೆ
ಮಂಗಳೂರು: ಉಳ್ಳಾಲ ಕಡಲ ತೀರದ ಕೈಕೊ ಮತ್ತು ಸುಭಾಷ್ನಗರದಲ್ಲಿ ಕಡಲಕೊರೆತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ತಾತ್ಕಾಲಿಕ ಕಾಮಗಾರಿ ಆರಂಭಿಸುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚಿಸಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಶುಕ್ರವಾರ ರಾತ್ರಿ ಅಧಿಕಾರಿಗಳ ಸಭೆ ಕರೆದು ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು. ಸುಭಾಷ್ನಗರ, ಹಿಲರಿ ನಗರದ ತೀವ್ರ ಕೊರೆತ ಇರುವ ಪ್ರದೇಶಗಳಲ್ಲಿ ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟ ಆಗದಂತೆ ತಾತ್ಕಾಲಿಕ ತಡೆ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದ ಸಚಿವರು, ನಿಯಮಗಳನ್ನು ಜನರಿಗೊಸ್ಕರ ಸಡಿಲಗೊಳಿಸಿ ಎಂದು ಸಲಹೆ ಮಾಡಿದರು.
ಬಂದರು ಅಧಿಕಾರಿಗಳು ಮೂರು ಸ್ಥಳಗಳಲ್ಲಿ ತಾತ್ಕಾಲಿಕ ಕಾಮಗಾರಿಗೆ ಒಟ್ಟು 55 ಲಕ್ಷದ ಯೋಜನೆಯನ್ನು ಸಚಿವರ ಮುಂದೆ ಇಟ್ಟರು. ಕಡಲ್ಕೊರೆತ ತಡೆಗೆ 100 ಕೋಟಿ ಶಾಶ್ವತ ಯೋಜನೆ ಎಡಿಬಿ ಅಡಿ ರೂಪಿಸಲಾಗಿದೆ. ಸೆಪ್ಟಂಬರ್ ತಿಗಳಲ್ಲಿ ಪ್ರಥಮ ಹಂತದ ಯೋಜನೆ ಆರಂಭಗೊಳ್ಳಲಿದೆ, ಆದ್ದರಿಂದ ಈ ಬಾರಿ ಏನಿದ್ದರೂ ತಾತ್ಕಾಲಿಕ ತಡೆ ರೂಪಿಸಿ, ಜನರನ್ನು ರಕ್ಷಿಸಿ ಎಂದರು.
ಇದೇ ಸಂದರ್ಭ ಡೆಂಘೀ ತಡೆಗೆ ಇನ್ನಷ್ಟು ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಮುಂದೆ ವರ್ಷಕ್ಕೆ ಮೊದಲೇ ಸಾಂಕ್ರಾಮಿಕ ರೋಗ ತಡೆಗೆ ಸಿದ್ಧತೆ ಮತ್ತು ಯೋಜನೆ ರೂಪಿಸುವಂತೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಕಾಶ್, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್, ಬಂದರು ಅಧಿಕಾರಿಗಳು ಉಪಸ್ಥಿತರಿದ್ದರು.