ಕಾಗೆ 'ಮಾನವೀಯ' ಮುಖ
ಮಂಗಳೂರು: ರಸ್ತೆ ಮಧ್ಯೆ ಯಾರಾದರೂ ಡಿಕ್ಕಿಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಅದನ್ನು ನೋಡಿ ಮುಂದೆ ಸಾಗುವ ಅನೇಕ ಪ್ರಕರಣಗಳು ನಡೆಯುತ್ತಿವೆ. ಆದರೆ ಮಂಗಳೂರಲ್ಲಿ ಕಂಡು ಬಂದ ಪಕ್ಷಿಗಳ ಮನಕಲುಕುವ 'ಮಾನವೀಯ' ದೃಶ್ಯ ಮಾನವರಿಗೆ ನೀತಿ ಪಾಠದಂತಿತ್ತು. ಎರಡು ದಿನಗಳ ಹಿಂದೆ ಕಾಗೆಯೊಂದು ವಿದ್ಯುದಾಲಿಂಗನಕ್ಕೆ ಸಿಕ್ಕಿ ಕಾಲು ಸುಟ್ಟುಕೊಂಡು ಅಂಗಾತ ಬಿದ್ದಿತ್ತು. ಇದನ್ನು ನೋಡಿದ ಇನ್ನೊಂದು ಕಾಗೆ ಬಿದ್ದಿದ್ದ ಕಾಗೆಯನ್ನು ಮೇಲೆದ್ದು ಹಾರುವಂತೆ ಕೊಕ್ಕಿನಲ್ಲಿ ರೆಕ್ಕೆ ಎಳೆಯುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ಬಿದ್ದಿದ್ದ ಕಾಗೆ ಎದ್ದು ಕುಂಟುತ್ತಾ ಸಾಗಿ, ಆಕಾಶದಲ್ಲಿ ಹಾರತೊಡಗಿತು. ಈ ದೃಶ್ಯವನ್ನು ಮಂಗಳೂರಿನ ರಜನಿ ಎಸ್. ಕ್ಯಾಮೆರಾದಲ್ಲಿ ಸೆರೆ ಹಿಡಿದರು.