ಗೌ. ಶಿಕ್ಷಕರ ನೇಮಕ: 2 ದಿನದಲ್ಲಿ ಅನುಮೋದನೆ
ಬೆಳ್ತಂಗಡಿ: ರಾಜ್ಯದಲ್ಲಿ 10ರಿಂದ 12 ಸಾವಿರ ಸ್ಥಳೀಯ ಗೌರವ ಶಿಕ್ಷಕರ ನೇಮಕಾತಿಗೆ ಎರಡು ದಿನದಲ್ಲಿ ಆರ್ಥಿಕ ಇಲಾಖೆ ಅನುಮೋದನೆ ದೊರೆಯಲಿದೆ ಎಂದು ರಾಜ್ಯ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 16 ಸಾವಿರ, ಪದವಿ ಪೂರ್ವ ಕಾಲೇಜ್ಗಳಲ್ಲಿ 1,200 ಶಿಕ್ಷಕರ ಕೊರತೆಯಿದೆ. ಇದರ ಭರ್ತಿಗೆ ಮಾನದಂಡ ನಿಗದಿಪಡಿಸಲಾಗಿದೆ. ಕೊರತೆಗೆ ಉಂಟಾಗದಂತೆ ತಾತ್ಕಾಲಿಕವಾಗಿ 10 ತಿಂಗಳ ಅವಧಿಗೆ ಗೌರವ ಶಿಕ್ಷಕರನ್ನು ನೇಮಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
4 ಸಾವಿರ ಕಾಯಂ ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ. 3ರಿಂದ 4 ತಿಂಗಳಲ್ಲಿ ಆದೇಶ ನೀಡಲಾಗುವುದು ಎಂದು ತಿಳಿಸಿದರು.
ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಶಿಕ್ಷಕರ ಮೀಸಲಾತಿಯಲ್ಲಿ ಉಂಟಾಗಿರುವ ಗೊಂದಲ ನಿವಾರಣಗೆ ಸಂಪುಟ ಉಪಸಮಿತಿ ರಚಿಸಲಾಗಿದೆ. 1600 ಶಿಕ್ಷಕರ ಹುದ್ದೆ ಈ ಭಾಗಕ್ಕೆ ದೊರೆಯುತ್ತದೆ. ಆದ್ದರಿಂದ ಸಂಪುಟ ಉಪಸಮಿತಿಯ ವರದಿ 15 ದಿನದಲ್ಲಿ ನೀಡುವ ವರದಿ ಬಳಿಕ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಜೂ. 1ರೊಳಗೆ ಪಠ್ಯಪುಸ್ತಕ ಹಾಗೂ ಶಾಲಾ ಸಮವಸ್ತ್ರ ವಿತರಣೆ ಸುಗಮವಾಗಿ ನಡೆಯಲು ಟೆಂಡರ್ ಪ್ರಕ್ರಿಯೆ ಜನವರಿಯಿಂದ ಪ್ರಾರಂಭಿಸಿ ಮೇ 15ರೊಳಗೆ ಮುಗಿಸಲು ಸೂಚಿಸಲಾಗಿದೆ ಎಂದು ವಿವರಿಸಿದರು.
ಜೆಒಸಿ, ದೈಹಿಕ, ಕಲಾ ಶಿಕ್ಷಕರ ನೇಮಕ ಹಾಗೂ ಗುತ್ತಿಗೆ ಶಿಕ್ಷಕರನ್ನು ಕಾಯಂ ಮಾಡುವುದು ಸೇರಿದಂತೆ ವಿವಿಧ ಸಮಸ್ಯೆಗಳಿವೆ. ಇವೆಲ್ಲದರ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಸಮಸ್ಯೆಗಳನ್ನು ಏಕಗಂಟಿನಲ್ಲಿ ನಿವಾರಿಸಲಾಗುವುದು. ಶಿಕ್ಷಕ ಸಂಘಟನೆಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಶಾಲೆ ಬಸ್: ಗ್ರಾಮಾಂತರ ಪ್ರದೇಶದ ಶಿಕ್ಷಣ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಪ್ರತಿ ಪಂಚಾಯಿತಿನಲ್ಲಿ ಇರುವ ಶಾಲೆಗಳನ್ನು ಲೆಕ್ಕ ತೆಗೆದು ತರಗತಿಗೊಬ್ಬ ಶಿಕ್ಷಕ ಇರುವಂತೆ ನೋಡಿಕೊಂಡು, ಶಾಲೆಗೆ ಮಕ್ಕಳು ಬರಲು ಸರ್ಕಾರದಿಂದಲೇ ಶಾಲೆ ಬಸ್ಗಳನ್ನು ಆರಂಭಿಸಲಾಗುವುದು ಎಂದರು.
ರಾಜ್ಯದಲ್ಲಿ ಎಲ್ಲಾ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ವಿಶೇಷವಾಗಿ ಗ್ರಾಮಾಂತರದ ಶಾಲೆಗಳ ಕುರಿತು ಗಮನಹರಿಸುತ್ತೇನೆ. ಶಿಕ್ಷಣ ಮಾಜಿ ಸಚಿವರೊಂದಿಗೆ ಚರ್ಚಿಸಿ ಇಲಾಖೆ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಬೇಕಾದ ಎಲ್ಲಾ ಸೌಲಭ್ಯಗಳ ನೀಡಲು ವಿವಿಧ ಸುಧಾರಣಾ ಕ್ರಮಕೈಗಳ್ಳಲಾಗುವುದು. 1- 2 ವರ್ಷದಲ್ಲಿ ಶಿಕ್ಷಣ ಇಲಾಖೆಯ ವಿವಿಧ ಸಮಸ್ಯೆ ನೀಗಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ವಿಜಯರಾಜ ಅತಿಕಾರಿ, ನಿರಂಜನ ಬಾವಂತಬೆಟ್ಟು, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಪಿ. ಕುಚಿನಾಡ್, ಸಿಆರ್ಪಿಗಳಾದ ಸುಭಾಷ್ ಜಾದವ್, ಕೃಷ್ಣ ಆಚಾರ್ಯ, ಜೋಸೆಫ್ ಪಿರೇರಾ, ಗಂಗಾ, ಯಶೋಧರ ಇದ್ದರು.
ಸನ್ಮಾನ: ಧರ್ಮಸ್ಥಳಕ್ಕೆ ಆಗಮಿಸಿದ ಸಚಿವರು ದೇವರ ದರ್ಶನ ಮಾಡಿ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಸಲಹೆ, ಸೂಚನೆ, ಮಾರ್ಗದರ್ಶನ ಪಡೆದರು. ಬಳಿಕ ಹೆಗ್ಗಡೆಯವರು ಸಚಿವರನ್ನು ಸನ್ಮಾನಿಸಿದರು.