ತಲೆ ಎತ್ತುತ್ತಿದೆ ತುಳುವರ ಕನಸಿನ ಭವನ
-ವಜ್ರಾಕ್ಷಿ ಬಂಟ್ವಾಳ
ಮಂಗಳೂರು: ತುಳುನಾಡಿನ ತುಳುವರಿಗಾಗಿ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ಉರ್ವಸ್ಟೋರಿನಲ್ಲಿ ನಾಲ್ಕು ಅಂತಸ್ತಿನ ಭವ್ಯವಾದ ತುಳುಭವನ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಹಲವು ವರ್ಷಗಳ ಕನಸು ಈಗ ನನಸಾಗುವ ಹಂತ ತಲುಪಿದೆ.
ಈಗಾಗಲೇ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ರು. 3ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡಿದೆ.
ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನದಲ್ಲಿರುವ ಅಕಾಡೆಮಿ ಇನ್ನೊಂದು ಕನಸು ಇದಾಗಿದೆ. ಈಗ ಇರುವ ಅಕಾಡೆಮಿ ಕಚೇರಿ ಪಾಲಿಕೆಯ ಬಾಡಿಗೆ ಕಟ್ಟಡವಾಗಿದೆ.
ಏನೆಲ್ಲ ಇರಲಿದೆ: ಭವನದಲ್ಲಿ ಅಕಾಡೆಮಿಯ ಸ್ವಂತ ಕಚೇರಿ, ಗ್ರಂಥಾಲಯ, ತುಳುನಾಡಿನ ಪರಿಕರಗಳ ಸಂಗ್ರಹಾಲಯ, ಮಿನಿ ಚಿತ್ರಮಂದಿರ, ವಿಶಾಲ ಸಭಾಂಗಣ, ಬಿನ್ನರೆ ಕೋಣೆ (ನೆಂಟರಿಗಾಗಿ 5 ಬೆಡ್‌ಗಳನ್ನು ಹೊಂದಿದ ತಂಗುವ ಸ್ಥಳ), ಸಮಾಲೋಚನೆ ಕೋಣೆ ಎಲ್ಲವೂ ಇಲ್ಲಿ ಇರಲಿದೆ.
800 ಮಂದಿ ಕುಳಿತುಕೊಳ್ಳುವ ಭವ್ಯ ಸಭಾಂಗಣ. ಇದರಲ್ಲಿ ಸಭೆ, ಸಮಾರಂಭ, ಮದುವೆ ಕಾರ್ಯಕ್ರಮಗಳು ನಡೆಸಲು ಅವಕಾಶವಿದೆ. ಮ್ಯೂಸಿಯಂನಲ್ಲಿ ತುಳುನಾಡಿನ ಸಂಸ್ಕೃತಿ, ಕೃಷಿ, ಯಕ್ಷಗಾನ, ನಾಗ-ದೈವಾರಾಧನೆಯ ಪ್ರಮುಖ ವಿವರ ಹಾಗೂ ಪರಿಕರಗಳನ್ನು ಇಡಲಾಗುತ್ತದೆ.
ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ್ ಕೋಟ್ಯಾನ್ ಅವರು ತುಳು ಭವನ ನಿರ್ಮಾಣಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದು, 2012 ರಂದು ರು. 4.90 ಲಕ್ಷ ಬಿಡುಗಡೆಗೊಳಿಸಿದೆ. ಅರ್ಧ ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡವು ಎರಡು ಅಂತಸ್ತನ್ನು ಪೂರೈಸಿದೆ. ಕೆಳ ಅಂತಸ್ತು ಸೇರಿ ಒಟ್ಟು ನಾಲ್ಕು ಮಹಡಿಗಳಿವೆ. ಇನ್ನೂ ರು. 1.90 ಕೋಟಿ ಮೊತ್ತದ ಕೆಲಸ ಬಾಕಿಯಿದೆ.
200 ಮಂದಿ ಕುಳಿತು ವೀಕ್ಷಿಸಬಹುದಾದ ಸಣ್ಣ ಚಿತ್ರಮಂದಿರದಲ್ಲಿ ತುಳು ಸಿನಿಮಾ, ಇನ್ನಿತರ ಸಾಕ್ಷ್ಯಚಿತ್ರಗಳನ್ನು ನೋಡಲು ಅವಕಾಶವಿದೆ.
ಅಕಾಡೆಮಿಯಲ್ಲಿ ಈಗಾಗಲೇ 1650 ತುಳುವಿಗೆ ಸಂಬಂಧಿಸಿದ ಕೃತಿ ಹಾಗೂ ಲೇಖನಗಳಿವೆ. ಇವುಗಳ ಜತೆಗೆ ಜಿಲ್ಲೆಯ ವಿವಿಧ ಗ್ರಂಥಾಲಯಗಳಲ್ಲಿರುವ ಪುಸ್ತಕಗಳನ್ನು ಇಲ್ಲಿಗೆ ತರಿಸಲಾಗುತ್ತದೆ ಎನ್ನುತ್ತಾರೆ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ.
ವಿವಿಧ ವಿನ್ಯಾಸದಿಂದ ಕೂಡಿದ ಕಟ್ಟಡದ ಕಲ್ಪನೆ ಸ್ವತಃ ಸಿವಿಲ್ ಬಿಲ್ಡರ್ ಆಗಿರುವ ಉಮಾನಾಥ ಕೋಟ್ಯಾನ್ ಅವರದ್ದು. ಹಾಗಾಗಿ ವಿನೂತನ ಮಾದರಿಯ ಕಟ್ಟಡದ ಸಂಪೂರ್ಣತೆಗೆ ಸುಮಾರು ರು. 8 ಕೋಟಿ ವೆಚ್ಚವಾಗಬಹುದು. ಇದಕ್ಕಾಗಿ ದೇಶ ವಿದೇಶದಲ್ಲಿರುವ ತುಳು ಸಂಘಟನೆ ಮತ್ತು ತುಳುವರಿಂದ ಸಹಾಯವನ್ನು ಅಕಾಡೆಮಿ ಬಯಸುತ್ತಿದೆ.