ಮಾ.31ಕ್ಕೆ ಶಿಕ್ಷಕರ ನಿವೃತ್ತಿ ನಿಗದಿಗೆ ಕ್ರಮ'
ಬೆಳ್ತಂಗಡಿ: ಶೈಕ್ಷಣಿಕ ವರ್ಷದ ನಡುವೆ ಶಿಕ್ಷಕರು ನಿವೃತ್ತರಾಗುವುದರಿಂದ ವಿದ್ಯಾರ್ಥಿಗಳಿಗೆ ಆಗುವ ತೊಂದರೆ ತಪ್ಪಿಸಲು ಶಿಕ್ಷಕರ ನಿವೃತ್ತಿಯನ್ನು ಮಾ.31ಕ್ಕೆ ನಿಗದಿಪಡಿಸಲು ಹಣಕಾಸು ಇಲಾಖೆ ಮೌಖಿಕ ಆದೇಶ ನೀಡಿದೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ. ಭಾನುವಾರ ಇಲ್ಲಿನ ಸುವರ್ಣ ಆರ್ಕೇಡ್‌ನಲ್ಲಿ ಬೆಳ್ತಂಗಡಿ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿ ಒಂದನೆ ತರಗತಿಯಿಂದ ಪಿಯುಸಿವರೆಗೆ ಸುಮಾರು 14 ಸಾವಿರ ಶಿಕ್ಷಕರ ಕೊರತೆಯಿದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಸುಮಾರು 12 ಸಾವಿರ ಗುತ್ತಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿ ಜತೆ ಮಾತನಾಡಲಾಗಿದೆ. ಇದರಿಂದ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಸಿಗಲಿದೆ. ಈಗಾಗಲೆ ನಾಲ್ಕು ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಮುಗಿದಿದ್ದರೂ, ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನದ ಹಿನ್ನೆಲೆಯಲ್ಲಿ ಅದು ಜಾರಿಯಾಗಿಲ್ಲ. ಆ ಶಿಕ್ಷಕರ ನೇಮಕ ಶೀಘ್ರ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.