ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಿಕ್ಷಕರ ಕೊರತೆ, ಪ್ರತಿಭಟನೆಗೆ ಪೋಷಕರ ನಿರ್ಧಾರ

Lingaraj Badiger
Updated On : 17 Jun 2013, 12:18 pm

ಸುಳ್ಯ: ಕೊಡಿಯಾಲದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 8ನೇ ತರಗತಿವರೆಗೆ ಒಟ್ಟು 85 ವಿದ್ಯಾರ್ಥಿಗಳಿದ್ದು, ಕೇವಲ ಇಬ್ಬರು ಶಿಕ್ಷಕರು ಮಾತ್ರ ಕರ್ತವ್ಯದಲ್ಲಿದ್ದಾರೆ. ಇದರಿಂದ ವಿದ್ಯಾಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೋಷಕರು, ಶಾಲೆಗೆ ಐವರು ಶಿಕ್ಷಕರನ್ನು ನೇಮಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕರ ಕೊರತೆ ಸೇರಿದಂತೆ ಶಾಲೆ ಎಸ್‌ಡಿಎಂಸಿಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಕೂಸಪ್ಪ ಮೂಲ್ಯರ ರಾಜಿನಾಮೆಯಿಂದ ತೆರವಾಗಿರುವ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಪುನಾರಚನೆ ಹಿನ್ನೆಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಪೋಷಕರು, ಶಿಕ್ಷಕರ ಕೊರತೆ ಬಗ್ಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶೇಷಮ್ಮ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಂಯೋಜಕ ಕೇಶವ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಪದ್ಮನಾಭ ಅವರ ಗಮನ ಸೆಳೆದರು. ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೂಲಕ ಶಿಕ್ಷಕರ ನಿಯೋಜನೆಗೆ ಮನವಿ ಸಲ್ಲಿಸಿ, ಒಂದು ತಿಂಗಳೊಳಗೆ ಶಿಕ್ಷಕರ ನೇಮಕವಾಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪೋಷಕರ ಪರವಾಗಿ ರವೀಂದ್ರ ರೈ ಪಿ, ಇಸಾಕ್, ವೆಂಕಟೇಶ್ ಪೈ, ಯತೀಶ್ ರೈ, ವಸಂತಿ ಪೈ, ಸರೋಜಿನಿ, ನಾಗವೇಣಿ ಮತ್ತಿತರರು ಇದ್ದರು.

8 ತರಗತಿಗೆ ಇಬ್ಬರೇ ಶಿಕ್ಷಕರು!
ಕೊಡಿಯಾಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಶಿಕ್ಷಕ ಹಾಗೂ ಒಬ್ಬ ಶಿಕ್ಷಕಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇರುವ ಒಬ್ಬ ಶಿಕ್ಷಕರಿಗೂ ಮುಖ್ಯೋಪಾಧ್ಯಾಯರ ಜವಾಬ್ದಾರಿಯನ್ನೂ ಹೊರಿಸಲಾಗಿದೆ. ಅವರು ಸಭೆಗಳಿಗೆ ಹೋದರೆ ಒಬ್ಬ ಶಿಕ್ಷಕಿ ಮಾತ್ರ 8 ತರಗತಿಗಳನ್ನು ನೋಡಿಕೊಳ್ಳುವ ಹೊಣೆ ಹೊರಬೇಕಿದೆ! ತೀರ ಗ್ರಾಮೀಣ ಪ್ರದೇಶವೆಂಬ ಕಾರಣಕ್ಕೆ ಇಲ್ಲಿಗೆ ಶಿಕ್ಷಕರು ವರ್ಗಾವಣೆ ಬಯಸುತ್ತಿಲ್ಲ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮಾತ್ರ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರ ವಿರುದ್ಧ ಸಿಡಿದೆದ್ದಿರುವ ಗ್ರಾಮಸ್ಥರು ಇದೀಗ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಶಾಲೆಯ ಈ ಸಮಸ್ಯೆಗಳಿಂದ ಬೇಸತ್ತ ಎಸ್‌ಡಿಎಂಸಿ ಅಧ್ಯಕ್ಷರು ರಾಜಿನಾಮೆ ನೀಡಿರುವುದರಿಂದ ಕೂಡ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ. ಇದಕ್ಕಾಗಿ ಪೋಷಕರು ಸಭೆ ಸೇರಿ ಪ್ರತಿಭಟನೆ ನಡೆಸುವ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement