ಶೀಘ್ರ ಎಲ್ಲ ಇಲಾಖೆ 'ಪೇಪರ್ಲೆಸ್': ಎಸ್.ಆರ್. ಪಾಟೀಲ್
ಮಂಗಳೂರು: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳನ್ನು 'ಪೇಪರ್ಲೆಸ್ ಇಲಾಖೆ'ಯಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಭಾನುವಾರ ಇಲ್ಲಿನ ಲೊಯಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನೂತನವಾಗಿ ಆಯ್ಕೆಗೊಂಡ ಶಾಸಕರು ಹಾಗೂ ಸಚಿವರ 'ಅಭಿನಂದನಾ ಹಾಗೂ ಚಿಂತನಾ ಸಮಾವೇಶ'ದಲ್ಲಿ ಅವರು ಮಾತನಾಡಿದರು. ಆಧುನಿಕ ತಂತ್ರಜ್ಞಾನ ಬಳಸಿ ಪೇಪರ್ಲೆಸ್ ಇಲಾಖೆಗಳಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಬೆಂಗಳೂರು ನಂತರ ಎರಡನೇ ಶ್ರೇಣಿ ಮಹಾನಗರಗಳಿಗೆ ಐಟಿ, ಬಿಟಿ ಕ್ಷೇತ್ರ ವಿಸ್ತರಿಸಲಾಗುವುದು. ಈ ನಿಟ್ಟಿನಲ್ಲಿ ಜೂ.20ರಂದು ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗುವುದು ಎಂದರು.
ಐ.ಟಿ.ಕಾರಿಡಾರ್ ಸ್ಥಾಪನೆ: ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಐಟಿ ಕಾರಿಡಾರ್ ಸ್ಥಾಪಿಸುತ್ತಿದೆ. ಇದರಿಂದ 400 ಮಂದಿ ಯುವಕರಿಗೆ ಉದ್ಯೋಗ ಸಿಗಲಿದೆ. ಈ ಯೋಜನೆಯ ಲಾಭ ಇಲ್ಲಿನವರಿಗೆ ದೊರಕಲಿದೆ. ಮಂಗಳೂರಿನ ಪಿಲಿಕುಳದಲ್ಲಿ 25 ಕೋಟಿ ವೆಚ್ಚದಲ್ಲಿ ಪ್ಲಾನಿಟೋರಿಯಂ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.