ಮನೆ ಮೇಲೆ ಮರ ಬಿದ್ದು ಹಾನಿ
ಸುಬ್ರಹ್ಮಣ್ಯ: ಹರಿಹರಪಲ್ಲತ್ತಡ್ಕ ದೇವರಗದ್ದೆ ಕುಂಞಕಣ್ಣನ್ ಎಂಬವರ ಹೆಂಚಿನ ಮನೆ ಮೇಲೆ ಭಾನುವಾರ ಸಂಜೆ ವೇಳೆ ಬೃಹತ್ ಗಾತ್ರದ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಭೀಕರ ಮಳೆ ಸುರಿದ ಪರಿಣಾಮ ಮರ ಉರುಳಿ ಬಿದ್ದಿದೆ. 600 ಹೆಂಚು ಸೇರಿದಂತೆ ಅಪಾರ ಪ್ರಮಾಣದ ಪೀಠೋಪರಣಗಳಿಗೆ ಹಾನಿಯಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದೆ.
ಸುಳ್ಯ: ಮಳೆ ಚುರುಕು, ಮನೆಗಳಿಗೆ ಹಾನಿ
ಸುಳ್ಯ: ತಾಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಸೋಮವಾರವೂ ಪ್ರತಾಪ ಮುಂದುವರಿಸಿದೆ. ಭಾರಿ ಮಳೆ, ಗಾಳಿಗೆ ಸೋಮವಾರ ಕೂಡಾ ರಸ್ತೆ ಬದಿಯಿರುವ ಮರಗಳು ಉರುಳಿ ಬಿದ್ದು ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ವಿದ್ಯುತ್ ಎಂದಿನಂತೆ ನಾಪತ್ತೆಯಾಗಿದೆ.
ಬರೆ ಜರಿದು ಗೋಡೆ ಬಿರುಕು: ಪೆರಾಜೆ ಗ್ರಾಮದ ನಿಡ್ಯಮಲೆ ಸೋಮಪ್ಪ ಫಾರೆಸ್ಟರ್ ಎಂಬವರ ಮನೆಯ ಹಿಂಬದಿಯ ಬರೆ ಜರಿದು ಬಿದ್ದಿದ್ದು, ಮನೆಯ ಒಂದು ಭಾಗ ಮುಚ್ಚಿ ಹೋಗಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಪೆರಾಜೆ ಗ್ರಾಮದ ಕುಂದಲ್ಪಾಡಿ ನಾಗೇಶ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ನಾಪತ್ತೆಯಾದ ಯುವತಿ ಮದುವೆಯಾಗಿ ಪತ್ತೆ
ಸುಳ್ಯ: ಅಮರ ಮುಡ್ನೂರು ಗ್ರಾಮದ ಕೂಟೇಲಿನಿಂದ ನಾಪತ್ತೆಯಾಗಿದ್ದ ಯುವತಿ, ಸುಳ್ಯ ಕಾಲೇಜೊಂದರ ವಿದ್ಯಾರ್ಥಿನಿ ಸುಕನ್ಯಾ ಪ್ರಿಯಕರನೊಂದಿಗೆ ಮದುವೆಯಾಗಿ ಕನ್ಯಾಕುಮಾರಿಯಲ್ಲಿ ಪತ್ತೆಯಾಗಿದ್ದಾಳೆ.
ಮಹಿಳಾ ಸಮಾಜಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದ ಯುವತಿ, ವಾಪಾಸ್ ಮನೆಗೆ ಹೋಗಿರಲಿಲ್ಲ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ಆಕೆಯ ಮನೆಯವರು ಸುಳ್ಯ ದೂರು ನೀಡಿದ್ದರು.
ನಾಪತ್ತೆಯಾಗಿದ್ದ ಸುಕನ್ಯಾ ತನ್ನ ಸಂಬಂಧಿ ಯುವಕ ಗುತ್ತಿಗಾರು ಗ್ರಾಮದ ಮಲ್ಕುಜಿ ಸಿಲಂಬರಸನ್ ಎಂಬಾತನನ್ನು ಪ್ರೀತಿಸುತ್ತಿದ್ದು, ಅವರಿಬ್ಬರು ಜೊತೆಯಲ್ಲಿ ಧರ್ಮಸ್ಥಳಕ್ಕೆ ತೆರಳಿ ಮದುವೆಯಾಗಿ, ಯುವಕನ ಸಂಬಂಧಿಕರ ಮನೆ ಕನ್ಯಾಕುಮಾರಿಗೆ ತೆರಳಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸುಕನ್ಯಾ ಹಾಗೂ ಸಿಲಂಬರಸನ್ನ್ನು ಸುಳ್ಯಕ್ಕೆ ಕರೆತಂದು ಹೇಳಿಕೆ ಪಡೆದಿದ್ದಾರೆ.