ವಿಟ್ಲ: ಸಂಚಾರ ಅಸ್ತವ್ಯಸ್ತ
ವಿಟ್ಲ: ಸೋಮವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ವಿಟ್ಲ-ಪುತ್ತೂರು ರಸ್ತೆಯಲ್ಲಿ ನೀರು ಹೊಳೆಯಂತೆ ಹರಿದ ಪರಿಣಾಮ ಸಾರ್ವಜನಿಕರು, ವಾಹನ ಚಾಲಕರು, ವಿದ್ಯಾರ್ಥಿಗಳು ಪರದಾಡಿದರು.
ಮಳೆಯ ಅಬ್ಬರಕ್ಕೆ ರಸ್ತೆ ಹಾಗೂ ಚರಂಡಿ ಒಂದೇ ರೀತಿಯಾಗಿ ಗೋಚರಿಸಿದ ಪರಿಣಾಮ ವಿಟ್ಲ ಗ್ರಾಮ ಪಂಚಾಯಿತಿ ವತಿಯಿಂದ ಇತ್ತೀಚೆಗೆ ಹೊಳೆತ್ತಲಾದ ಚರಂಡಿಯ ಹೊಂಡಕ್ಕೆ ಮಹಿಳೆಯೊಬ್ಬರು ಬಿದ್ದು ಸಣ್ಣಪುಟ್ಟ ಗಾಯಗೊಂಡ ಘಟನೆ ನಡೆದಿದೆ.
ನದಿಯಂತಾದ ಹೆದ್ದಾರಿ: ಚರಂಡಿಯಲ್ಲಿ ನೀರು ಹರಿಯಲು ಸಮರ್ಪಕವಾದ ವ್ಯವಸ್ಥೆಯಿಲ್ಲದೇ ಪಟ್ಟಣದ ಮುಖ್ಯ ರಸ್ತೆ ನದಿಯಂತೆ ಗೋಚರಿಸಿತು. ಈ ರಸ್ತೆಯಲ್ಲಿ ಪಕಳಕುಂಜಕ್ಕೆ ತೆರಳುವ ಕೆಎಸ್ಆರ್ಟಿಸಿ ಬಸ್ಸೊಂದು ಕಿರಿದಾದ ರಸ್ತೆಯಲ್ಲಿ ನಿಂತ ಪರಿಣಾಮ ವಾಹನಗಳಿಗೆ ಸಂಚರಿಸಲು ಜಾಗವಿಲ್ಲದೆ ಸಂಚಾರ ಅಸ್ತವ್ಯಸ್ತಗೊಂಡಿತು.
ಸಂತೆ ರಸ್ತೆಯಲ್ಲಿ ಚರಂಡಿಯಿಲ್ಲದ ಪರಿಣಾಮ ಅಲ್ಲಿಂದ ಮಳೆ ನೀರು ನೇರವಾಗಿ ವಿಟ್ಲ- ಪುತ್ತೂರು ರಸ್ತೆಯನ್ನು ಸೇರುತ್ತಿತ್ತು. ಅಂಗಡಿಗಳಿಗೆ ಸಾಮಗ್ರಿ ಖರೀದಿಸಲು ಅಂಗಡಿಯೊಳಗೆ ತೆರಳಿದವರು ಹಿಂತಿರುಗಿ ಬರಲು ನೀರು ಖಾಲಿಯಾಗುವವರೆಗೆ ಕಾಯಬೇಕಾಯಿತು. ಸೋಮವಾರ ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭವಾದುದ್ದರಿಂದ ಹಾಗೂ ವಿಟ್ಲ ಪೇಟೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಪರಿಣಾಮ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ನಡೆದಾಡಲು ಪರದಾಡಬೇಕಾಯಿತು.