ಸ್ಥಳೀಯಾಭಿವೃದ್ಧಿ ಪ್ರಾಧಿಕಾರ ರದ್ದತಿ ಇಲ್ಲ: ಸಚಿವ ಸೊರಕೆ
ಮಂಗಳೂರು: ಎಲ್ಲ ನಗರಗಳಲ್ಲಿರುವ ಸ್ಥಳೀಯಾಭಿವೃದ್ಧಿ ಪ್ರಾಧಿಕಾರಗಳನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಎಲ್ಲ ಕಡೆಗಳಲ್ಲಿ ಸ್ಥಳೀಯಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಸ್ಥಳೀಯಾಡಳಿತಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಸ್ಪಷ್ಟಪಡಿಸಿದರು.
ಅವರು ಮೂಡಾ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಸರ್ಕಾರ ಸ್ಥಳೀಯಾಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸುವ ಇಲ್ಲವೇ ಸ್ಥಳೀಯಾಡಳಿತಗಳ ಜತೆ ಸೇರ್ಪಡೆಗೊಳಿಸುವ ಪ್ರಸ್ತಾಪ ಮಾಡಿತ್ತು. ಆದರೆ, ಇಂಥ ಪ್ರಸ್ತಾಪ ಈ ಸರ್ಕಾರದ ಮುಂದಿಲ್ಲ ಎಂದರು.
ಚೇಳ್ಯಾರು ಮತ್ತು ಕೊಣಾಜೆಗಳಲ್ಲಿ ಬಡಾವಣೆ ನಿರ್ಮಾಣಕ್ಕೆ ಖರೀದಿಸಿದ ಜಾಗವನ್ನು ಅಭಿವೃದ್ಧಿಪಡಿಸದೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ಕ್ಕೆ ನಷ್ಟವುಂಟಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದರು.
ಮೂಡಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಚೇಳ್ಯಾರು ಮತ್ತು ಕೋಣಾಜೆಗಳಲ್ಲಿ ಮೂಡಾ ಬಡಾವಣೆಗೆ ಜಾಗ ಖರೀದಿಸಿ ಅನೇಕ ವರ್ಷಗಳು ಕಳೆದಿದೆ. ಬ್ಯಾಂಕಿನಿಂದ ಸಾಲ ಮಾಡಿ ಖರೀದಿಸಿದ್ದರಿಂದ ಆದಾಯ ಬಾರದೆ ಮೂಡಾ ನಷ್ಟಹೊಂದುವಂತಾಗಿದೆ. ಯಾವುದೇ ನಿಖರ ಯೋಜನೆ ಇಲ್ಲದೆ ಜಾಗ ಖರೀದಿಸಿದ್ದು ಯಾಕೆ? ಖರೀದಿಸಿದ ಜಾಗವನ್ನು ಈವರೆಗೆ ಯಾಕೆ ಅಭಿವೃದ್ಧಿಪಡಿಸಿಲ್ಲ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಹೇಳಿದರು.