'ಉಪನ್ಯಾಸಕರ ಆನ್ಲೈನ್ ನೇಮಕ ಪ್ರಕ್ರಿಯೆ ರದ್ದುಗೊಳಿಸಿ'
ಮಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಆನ್ಲೈನ್ ಮೂಲಕ ಮಾಡುವ ಮೂಲಕ ಅನುಭವಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ತಕ್ಷಣ ಆನ್ಲೈನ್ ನೇಮಕ ರದ್ದುಗೊಳಿಸಬೇಕು ಎಂದು ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ನಾಗರಾಜ್, ಮಂಗಳೂರು ವಿವಿಯಲ್ಲಿ ರ್ಯಾಂಕ್ ಬಂದವರಿಗೆ ಶೇ.60 ಅಂಕ ನೀಡುತ್ತಾರೆ. ಉಳಿದ ವಿವಿಯಲ್ಲಿ ಶೇ.90ಕ್ಕೂ ಮಿಕ್ಕಿ ಅಂಕ ನೀಡುವ ಪರಿಪಾಠ ಇದೆ. ಹಿಂದೆಲ್ಲ ಪ್ರಥಮ ದರ್ಜೆ ತೇರ್ಗಡೆ ಉತ್ತಮ ಫಲಿತಾಂಶ ಆಗಿರುತ್ತಿತ್ತು. ಈಗ ಸೆಮಿಸ್ಟರ್ ಪದ್ಧತಿ ಬಂದ ಬಳಿಕೆ ಶೇ.90 ಅಂಕ ಪಡೆಯುವುದು ಕಷ್ಟವೇನಲ್ಲ. ಆದ್ದರಿಂದ 10ಕ್ಕೂ ಹೆಚ್ಚು ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಹಿರಿಯರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅನುಭವಕ್ಕೆ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 15 ಅಂಕ ಮಾತ್ರ ನೀಡುತ್ತಾರೆ. ಆದರೂ ಈಗಿನ ಅಂಕಗಳಿಕೆ ಪ್ರಮಾಣದಲ್ಲಿ ಹೊಸಬರ ಜತೆ ಸ್ಪರ್ಧಿಸಲು ಸಾಧ್ಯವೇ ಇಲ್ಲ. ದೂರದ ಊರುಗಳಿಗೆ ನಿಯೋಜನೆ ಮಾಡಿದರೆ ಕೇವಲ ತಿಂಗಳ 8 ಸಾವಿರ ಗೌರವಧನದಲ್ಲಿ ಬದುಕು ಸಾಗಿಸಲು ಸಾಧ್ಯವಿಲ್ಲ ಎಂದರು.
ಕಾರ್ಯದರ್ಶಿ ಅರವಿಂದ ಬಿಜೈ ಮಾತನಾಡಿ, ಈಗ ಎರಡು ಕಾಲೇಜುಗಳಲ್ಲಿ ಒಬ್ಬ ಉಪನ್ಯಾಸಕರಿಗೆ ಕೆಲಸ ಮಾಡುಬಹುದಿತ್ತು. ಈಗ ಒಂದೇ ಕಾಲೇಜಿಗೆ ಸೀಮಿತಗೊಳಿಸಿ ದುಡಿಯುವ ಹಕ್ಕು ಕಸಿದುಕೊಂಡಿದ್ದಾರೆ. ವರ್ಷಕ್ಕೆ 9 ತಿಂಗಳು ವೇತನ ಸಿಗುವುದು. ಅದರಲ್ಲಿಯೂ ಕಳೆದ ವರ್ಷ ಕೇವಲ 2 ತಿಂಗಳು ಮಾತ್ರ ವೇತನ ಬಂದಿದೆ. ಬಾಕಿ ವೇತನ ಜೂ.14ರೊಳಗೆ ನೀಡುವುದಾಗಿ ಶಿಕ್ಷಣ ಸಚಿವರ ಹೇಳಿದ್ದರೂ ಇದುವರೆಗೂ ಬಿಡುಗಡೆಯಾಗಿಲ್ಲ. ಉದ್ಯೋಗ ಭದ್ರತೆ ಇಲ್ಲದೆ ದುಡಿಯಬೇಕು. ಕಷ್ಟಪಟ್ಟು ಗಳಿಸಿದ ಪದವಿಗಳಿಗೆ ಬೆಲೆಯೇ ಇಲ್ಲ ಎಂದರು.
ಕಸಾಪ ಬೆಂಬಲ: ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ. ಉತ್ತಮ ಪ್ರಜೆಗಳನ್ನು ರೂಪಿಸುವ ಉಪನ್ಯಾಸಕರ ಬದುಕನ್ನು ಸರ್ಕಾರ ಈ ರೀತಿ ಸಂಕಷ್ಟದ ಕೂಪಕ್ಕೆ ತಳ್ಳುವುದು ಸರಿ ಅಲ್ಲ ಎಂದು ಕಲ್ಕೂರ ಹೇಳಿದ್ದಾರೆ.