ಕನ್ಯಾನ ಗ್ರಾಮದ ತೋಟದಲ್ಲಿ ಗುಹೆ
ವಿಟ್ಲ: ಇಲ್ಲಿಗೆ ಸಮೀಪದ ಕನ್ಯಾನ ಗ್ರಾಮದ ತೋಟದ ಮೂಲೆ ಎಂಬಲ್ಲಿ ಬೃಹತ್ ಬಂಡೆಕಲ್ಲಿನ ಅಡಿಭಾಗದಲ್ಲಿ ಗುಹೆಯೊಂದು ಪತ್ತೆಯಾಗಿದೆ. ಇಲ್ಲಿನ ಗುಡ್ಡವೊಂದರ ತುತ್ತತುದಿಯಲ್ಲಿ ದೊಡ್ಡ ಬಂಡೆಕಲ್ಲು ಇದ್ದು, ಇದರ ಮೇಲೆ ಮಕ್ಕಳು ಆಡುತ್ತಿರುವಾಗ ಭಾರಿ ಸದ್ದು ಕೇಳಿ ಬರುತ್ತಿತ್ತು. ಸ್ಥಳೀಯರು ಹೇಳುವ ಪ್ರಕಾರ, ಮಕ್ಕಳೇ ಆಟ ಆಡುತ್ತ ಆಡುತ್ತ ಬಂಡೆಯ ಸುತ್ತಲಿನ ಮಣ್ಣನ್ನು ಅಗೆದು ತೆಗೆದಿದ್ದಾರೆ. ಆಗ ಕಲ್ಲಿನ ಕೆಳಭಾಗದಲ್ಲಿ ದ್ವಾರ ಕಂಡುಬಂತು. ದ್ವಾರಕ್ಕೆ ಅನೇಕ ಕಲ್ಲುಗಳನ್ನು ಮುಚ್ಚಿ, ಒಳಗೆ ಪ್ರವೇಶಿಸಲು ಸಾಧ್ಯವಿಲ್ಲದಂತೆ ಮಾಡಲಾಗಿತ್ತು. ಒಬ್ಬ ಯುವಕ ಇದರೊಳಗೆ ಪ್ರವೇಶಿಸಿ, ಇಡೀ ಬಂಡೆಕಲ್ಲಿನ ಅಡಿಭಾಗ ಕೊರೆದು ಈ ಗುಹೆ ನಿರ್ಮಿಸಿರುವುದು ಖಚಿತಪಡಿಸಿದ್ದಾನೆ. 4.5 ಅಡಿ ವೃತ್ತಾಕಾರದ ಗುಹೆ ಇದಾಗಿದ್ದು, ಮಧ್ಯದಲ್ಲಿ ಒಂದು ಅಡಿ ಆಳದ ಹೊಂಡ ನಿರ್ಮಿಸಲಾಗಿದೆ.