ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅರ್ಹ ವ್ಯಕ್ತಿಗೆ ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಗಲಿ: ಆಗ್ರಹ

Lingaraj Badiger
Updated On : 20 Jun 2013, 11:46 am

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸಾಹಿತ್ಯದ ಪರಿಜ್ಞಾನ ಇರುವ, ಲೇಖನಗಳನ್ನು ಬರೆದಿರುವ ಅರ್ಹ ವ್ಯಕ್ತಿಯನ್ನು ಅಧ್ಯಕ್ಷ ಹಾಗೂ ಸದಸ್ಯರಾಗಿ ನೇಮಿಸಬೇಕು ಎಂದು ಕೊಂಕಣಿ ಲೇಖಕರ ಒಕ್ಕೂಟ ಆಗ್ರಹಿಸಿದೆ.
ಕೊಂಕಣಿ ಸಾಹಿತ್ಯ ಅಕಾಡೆಮಿ ರಚನೆಯಾದ ಆರಂಭದ ಒಂದೆರಡು ಅವಧಿಯನ್ನು ಹೊರತು ಪಡಿಸಿದರೆ ಇಲ್ಲಿಯವರೆಗೆ ಅಕಾಡೆಮಿ ಅಧ್ಯಕ್ಷ ಮತ್ತು ಸದಸ್ಯರ ನೇಮಕ ಮಾಡುವಾಗ ಉದ್ಯಮಿಗಳ ಲಾಬಿಗೆ ಮಣಿದು ಬರಹಗಾರರಲ್ಲದವರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದ್ದರಿಂದ ಈ ಬಾರಿಯ ಸರ್ಕಾರದ ನಿಯಮದಂತೆ ಎರಡು ಸೃಜನಶೀಲ ಸಾಹಿತ್ಯ ಕೃತಿ ಪ್ರಕಟಿಸಿದವರನ್ನು ಪರಿಗಣಿಸಿ ಆಯ್ಕೆಮಾಡಬೇಕು. ಇಲ್ಲವಾದಲ್ಲಿ ಒಕ್ಕೂಟ ಪ್ರತಿಭಟನೆ ನಡೆಸಲಿದೆ ಎಂದು ಒಕ್ಕೂಟ ಅಧ್ಯಕ್ಷ ಹೆನ್ರಿ ಮೆಂಡೋನ್ಸಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಹಿಂದಿನ ಅಕಾಡೆಮಿಯಲ್ಲಿ ಸದಸ್ಯರಾಗಿದ್ದವರು ರಾಜಕೀಯ ಪಕ್ಷದ ಕಾರ್ಯಕರ್ತರು, ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಹಿನ್ನಲೆ ಇಲ್ಲದವರು ಆದ್ದರಿಂದ ಅಂಥವರಿಗೆ ಮರುಅವಕಾಶ ನೀಡಬಾರದು.  ಅಕಾಡೆಯನ್ನು ಖಾಸಗಿ ಆಸ್ತಿಯನ್ನಾಗಿ ಪರಿಗಣಿಸಿ ಆರ್ಥಿಕ ಅವ್ಯವಹಾರ ನಡೆಸಲಾಗಿದೆ. ಅಕಾಡೆಮಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು ನಡೆಯದೆ ಸಂಗೀತ, ನಾಟಕ, ಸಿನಿಮಾದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರು ಹೊರರಾಜ್ಯದವರಾಗಿದ್ದಾರೆ. ಇಂಥವರ ಆಯ್ಕೆಯಿಂದ ರಾಜ್ಯದಲ್ಲಿನ ಅರ್ಹರ ಹಕ್ಕನ್ನು ಕಸಿಯುವ ಕಾರ್ಯವಾಗುತ್ತಿದೆ. ಹೊರರಾಜ್ಯದವರಿಗೆ ಗೌರವ ನೀಡಬಹುದೇ ಹೊರತು ಅಧ್ಯಕ್ಷ ಸ್ಥಾನ ನೀಡಬಾರದು ಎಂದು ಆಗ್ರಹಿಸಿದರು.
ರೈಲು ನಂಬರ್ ಬದಲಾವಣೆ
ಮಂಗಳೂರು: ನೈಋತ್ಯ ರೇಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳ ನಂಬರ್‌ನ್ನು ಸಪ್ಟೆಂಬರ್‌ನಿಂದ ಬದಲಾವಣೆ ಮಾಡಲಾಗಿದೆ. 16107 ನಂಬರಿನ ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ನಂಬರು ಇನ್ನು 16859, 16108 ನಂಬರಿನ ಮಂಗಳೂರು ಸೆಂಟ್ರಲ್-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್(16860), 16865 ಕರಿಯಾಕಲ್-ಎರ್ನಾಕುಲಂ ಎಕ್ಸ್‌ಪ್ರೆಸ್(16185), 16866 ಎರ್ನಾಕುಲಂ-ಕರಿಯಾಕಲ್ ಎಕ್ಸ್‌ಪ್ರೆಸ್(16186)ನಂಬರು ಬದಲಾಗಲಿದೆ ಎಂದು ಫಾಲ್ಘಾಟ್ ವಿಭಾಗದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement