ಇಬ್ಬರು ಮಕ್ಕಳೊಂದಿಗೆ ನದಿಗೆ ಧುಮುಕಿ ತಾಯಿ ಆತ್ಮಹತ್ಯೆ
ಮಂಗಳೂರು: ಉಳ್ಳಾಲ ನೇತ್ರಾವತಿ ನದಿ ಹಾದು ಹೋಗುವ ರೇಲ್ವೆ ಸೇತುವೆಯಿಂದ ಧುಮುಕಿ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಭವಿಸಿದೆ.
ಬಿ.ಸಿ.ರೋಡ್ ಕಲ್ಲಮಜಲು ನಿವಾಸಿ ಮಮ್ತಾಜ್ (30), ಆಕೆಯ ಮಕ್ಕಳಾದ ಫಾತಿಮಾ ನಯಿಶಾನ್ (8) ಮತ್ತು ಖತೀಜಾನಾ ನಯಿಶಾನ್ (6) ನೀರು ಪಾಲಾದವರು. ಇವರಲ್ಲಿ ಮಮ್ತಾಜ್ ಮತ್ತು ಫಾತಿಮಾ ಶವ ಪತ್ತೆಯಾಗಿದೆ. ಮಧ್ಯಾಹ್ನ ವೇಳೆ ರೇಲ್ವೆ ಹಳಿಯಲ್ಲಿ ನಡೆದುಕೊಂಡು ಬಂದ ಮಮ್ತಾಜ್ ನೇತ್ರಾವತಿ ಸೇತುವೆ ಮಧ್ಯೆ ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೇಲ್ವೆ ಸೇತುವೆಯಲ್ಲಿ ಆಕೆಯ ಮೊಬೈಲ್ ಮತ್ತು ಪರ್ಸ್ ಸಿಕ್ಕಿದೆ. ಈಕೆ ಮಕ್ಕಳೊಂದಿಗೆ ರೇಲ್ವೆ ಹಳಿಯಲ್ಲಿ ಸೇತುವೆ ಕಡೆಗೆ ಸಾಗುತ್ತಿದ್ದುದನ್ನು ಕಂಡ ಸ್ಥಳೀಯರು ಸ್ವಲ್ಪ ಹೊತ್ತಿನ ಬಳಿಕ ನೋಡಿದಾಗ ಸ್ವತ್ತು ಪತ್ತೆಯಾಗಿದೆ. ಕೌಟುಂಬಿಕ ಕಲಹವೇ ಘಟನೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.