ಗಾಲ್ಫ್ ಕೋರ್ಟ್ ನಿರ್ಮಾಣ ನೆನೆಗುದಿಗೆ
ಮಂಗಳೂರು: ಪ್ರವಾಸೋದ್ಯಮ ಇಲಾಖೆಯ ಯೋಜನೆಯಲ್ಲೊಂದಾದ ತಣ್ಣೀರು ಬಾವಿ ಗಾಲ್ಫ್ ಕೋರ್ಟ್ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯ ಪ್ರಕ್ರಿಯೆ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ಪ್ರಕ್ರಿಯೆ ಆರಂಭಗೊಳ್ಳದೆ ನೆನೆಗುದಿಗೆ ಬಿದ್ದಿದೆ.
ಇದಕ್ಕಾಗಿ ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿರುವ 135 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಇತ್ತೀಚೆಗೆ ಕಂದಾಯ ಇಲಾಖೆ, ಖಾಸಗಿ ಸಂಸ್ಥೆ, ಪ್ರವಾಸೋದ್ಯಮ ಇಲಾಖೆ ಪರಿಶೀಲನೆ ನಡೆಸಿದ್ದು, ಇನ್ನೂ ಜಮೀನು ವಶಪಡಿಸಲಾಗಿಲ್ಲ.
ಕಳೆದ ನಾಲ್ಕು ವರ್ಷಗಳಿಂದ ಗಾಲ್ಫ್‌ಕೋರ್ಟ್ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2ವರ್ಷದ ಹಿಂದೆ ಅನುಮತಿ ನೀಡಿದ್ದು, ಒಡಂಬಡಿಕೆ ಮಾಡಿಕೊಂಡಿರುವ(ಎಂಒಯು) ಸಂಸ್ಥೆಗಳು ನಿಧಾನಗತಿಯಲ್ಲಿ ಕಾರ್ಯಾಚರಿಸುತ್ತಿದೆ. ಕರಾವಳಿ ಪ್ರದೇಶದಲ್ಲಿರುವ ಪಣಂಬೂರು ಹಾಗೂ ಸೋಮೇಶ್ವರ ಬೀಚ್ ಅಭಿವೃದ್ಧಿಗೊಳಿಸಲಾಗಿದ್ದು, ಪ್ರವಾಸಿಗರ ಆಕರ್ಷಣೀಯ ತಾಣವಾಗಿ ರೂಪಿಸಲಾಗಿದೆ.
ಗಾಲ್ಫ್ ಕೋರ್ಟ್ ನಿರ್ಮಾಣದಿಂದ ತಣ್ಣೀರು ಬಾವಿ ಬೀಚ್ ಅಭಿವೃದ್ಧಿಗೊಳ್ಳಲಿದೆ. ಅಲ್ಲದೆ ಪ್ರವಾಸಿಗರನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಲು ಇದು ಒಂದು ಮಾರ್ಗವಾಗುತ್ತದೆ.
ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಿಂದ ಇಳಿದ ಹೆಚ್ಚು ಮಂದಿ ಪ್ರವಾಸಿಗರು ಒಂದೆರಡು ದಿನ ಮಂಗಳೂರು ಸುತ್ತಾಡಿ ನಂತರ ಕೇರಳಕ್ಕೆ ತೆರಳುತ್ತಿದ್ದಾರೆ. ಇಲ್ಲಿ ಪ್ರವಾಸಿಗರನ್ನು ಉಳಿಸುವಂಥ ಸೌಕರ್ಯಗಳನ್ನು ಒದಗಿಸಿದಾಗ ಆದಾಯ ಹೆಚ್ಚಾಗುತ್ತದೆ. ಇದನ್ನು ನಗರದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಸಹಕಾರಿಯಾಗುತ್ತದೆ. ಕಡಲ ಕಿನಾರೆಯಲ್ಲಿರುವ ಮೀನುಗಾರರಿಗೆ ತಮ್ಮ ಮನೆಯಲ್ಲಿ ಪ್ರವಾಸಿಗರಿಗೆ ಬೇಕಾದ ಖಾದ್ಯಗಳನ್ನು ತಯಾರಿಸಿ ಮೂಲಕ ಉದ್ಯೋಗವನ್ನು ಸೃಷ್ಟಿಸಬಹುದು.
ಸಮುದ್ರ ಕಿನಾರೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮರಗಳಿವೆ. ಮೈದಾನ ನಿರ್ಮಾಣದ ಸಂದರ್ಭ ಕೆಲವು ಮರಗಳನ್ನು ಕಡಿಯಬೇಕಾಗುತ್ತದೆ. ಹಾಗಾಗಿ ಅರಣ್ಯ ಇಲಾಖೆಯ ಅನುಮತಿಗೆ ಕಾಯುತ್ತಿದೆ. ಕೆಲವು ತಿಂಗಳ ಹಿಂದೆ ಕಂದಾಯ ಇಲಾಖೆ ಮತ್ತು ಖಾಸಗಿ ಸಂಸ್ಥೆ ಸ್ಥಳವನ್ನು ಪರಿಶೀಲಿಸಿದೆ. 3.ಕಿ.ಮೀ. ಉದ್ದದ ಮೈದಾನವು ಸರಿಯಾದ ಆಯಕಟ್ಟು ಹೊಂದಿಲ್ಲದ ಪರಿಣಾಮ ಸಂಸ್ಥೆ ಸರ್ವೇ ನಡೆಸುತ್ತಿದೆ. ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಪೂರ್ಣಗೊಳ್ಳಲು ವರ್ಷಗಳೇ ಬೇಕಾಗುತ್ತದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಸಹನಿರ್ದೇಶಕ ಜಿತೇಂದ್ರನಾಥ್.
ಗಾಲ್ಫ್ ಕೋರ್ಟ್ ನಿರ್ಮಾಣಗೊಳ್ಳುತ್ತಿದೆ ಎಂಬ ಮಾಹಿತಿಯ ನಂತರ ತಣ್ಣೀರು ಬಾವಿ ಪ್ರದೇಶದಲ್ಲಿ ಅಕ್ರಮ ಶೆಡ್‌ಗಳನ್ನು ನಿರ್ಮಿಸಿ ಜನ ವಾಸ ಮಾಡುತ್ತಿದ್ದಾರೆ. ಇವರನ್ನು ಶೀಘ್ರದಲ್ಲಿ ತೆರವುಗೊಳಿಸಲಾಗುವುದು ಎಂದರು.
ಈಗಾಗಲೇ ಪಿಲಿಕುಳ ನಿಸರ್ಗಧಾಮದ 60 ಎಕರೆ ಪ್ರದೇಶದಲ್ಲಿ ಪಿಲಿಕುಳ ಗಾಲ್ಫ್ ಕೋರ್ಸು ಆರಂಭಗೊಂಡಿದ್ದು, ಬ್ಯಾಂಕ್‌ಗಳ ಸಹಯೋಗದಲ್ಲಿ ಮಕ್ಕಳಿಗೆ ಗಾಲ್ಫ್ ತರಬೇತಿ ನೀಡಲಾಗುತ್ತಿದೆ. ಈಗಾಗಲೇ 60 ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ಗಾಲ್ಫ್ ತರಬೇತಿ ಪಡೆದಿರುತ್ತಾರೆ.
ಆದಾಯ ಹೆಚ್ಚಳ: 'ಗಾಲ್ಫ್ ಕೋರ್ಟ್ ನಿರ್ಮಾಣದಿಂದ ನಗರಕ್ಕೆ ಬಂದ ಪ್ರವಾಸಿಗರ ಖರ್ಚುವೆಚ್ಚಕ್ಕೆ ವೇದಿಕೆ ಕಲ್ಪಿಸಿದಂತಾಗುತ್ತದೆ. ಇಲ್ಲವಾದಲ್ಲಿ ಪ್ರವಾಸಿಗರು ನಗರ, ದೇವಸ್ಥಾನ ಸುತ್ತಾಡಿ ಕೇರಳಕ್ಕೆ ತೆರಳುತ್ತಾರೆ. ಇಲ್ಲಿ ಉಳಿಯುವಂತೆ ಮಾಡಿದಾಗ ಆದಾಯ ಹೆಚ್ಚಾಗುತ್ತದೆ' ಎನ್ನುತ್ತಾರೆ ಪಣಂಬೂರು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಇಒ ಯತೀಶ್ ಬೈಕಂಪಾಡಿ.
- ವಜ್ರಾಕ್ಷಿ ಬಂಟ್ವಾಳ