ಪೆಟ್ರೋಲ್ ಬಂಕ್‌ನಿಂದ ಲಾರಿ ಕಳವು
ಬಂಟ್ವಾಳ: ಮೆಲ್ಕಾರ್ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಲಾರಿ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ, ಶನಿವಾರಸಂತೆಯ ಬೆಳ್ಳಾರೆ ನಿವಾಸಿ ಅಬ್ದುಲ್ ಹಜೀಜ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಜೂ.15 ರಂದು ಸಂಜೆ ಮೆಲ್ಕಾರ್‌ನ ಪೆಟ್ರೋಲ್‌ಬಂಕ್‌ನಲ್ಲಿ ಲಾರಿ(ಕೆಎ19 ಬಿ 1267) ನಿಲ್ಲಿಸಿದ್ದು, 17ರಂದು ಬಂದು ನೋಡಿದಾಗ ಲಾರಿ ಇರಲಿಲ್ಲ. ಲಾರಿ ಕಳವಾಗಿದ್ದು ಅದರ ಮೌಲ್ಯ ರು. 4 ಲಕ್ಷ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಲಯ ಕಾಂಗ್ರೆಸ್
ಸಮಿತಿ ವಿಸರ್ಜನೆ
ಗೋಣಿಕೊಪ್ಪಲು: ಇಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ಶನಿವಾರ ಜರುಗಿದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಎಲ್ಲ 20 ವಲಯ ಕಾಂಗ್ರೆಸ್ ಸಮಿತಿಯನ್ನು ವಿಸರ್ಜಿಸಿರುವುದಾಗಿ ಅಧ್ಯಕ್ಷ ಶಿವು ಮಾದಪ್ಪ ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆ ಇನ್ನು ಒಂದು ತಿಂಗಳಿನ ಅವಧಿಯಲ್ಲಿ ನೂತನ ವಲಯ ಕಾಂಗ್ರೆಸ್ ಸಮಿತಿ ಪುನರ್‌ರಚನೆ ಮಾಡಲಿರುವುದಾಗಿ ಅವರು ತಿಳಿಸಿದ್ದಾರೆ.
ಸ್ವಾಭಿಮಾನಿ ಆಂದೋಲನ ಚಿಂತನಾಗೋಷ್ಠಿ
ಪುತ್ತೂರು: ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ವತಿಯಿಂದ ದೇಶದ ಮುಂದಿರುವ ಗಂಭೀರ ಸಮಸ್ಯೆಗಳ ಪರಿಹಾರದ ಬಗ್ಗೆ ರಚನಾತ್ಮಕ ಚಿಂತನಾ ಗೋಷ್ಠಿಯನ್ನು 21ರಂದು ಪುತ್ತೂರಿನ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ತಿಳಿಸಿದ್ದಾರೆ. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಂತಕ ಮಾನ್ಯವರ ಗೋವಿಂದಾಚಾರ್ಯ ಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು. ಪುತ್ತೂರಿನ ಮಾಜಿ ಶಾಸಕ ಕೆ. ರಾಮ ಭಟ್ ಗೋಷ್ಠಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.