ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ ಭಾರತಕ್ಕೆ ಮರಳುತ್ತಿದ್ದಂತೆ ಬಂಧನ
ಉಪ್ಪಿನಂಗಡಿ: ವಿದೇಶಕ್ಕೆ ಪಲಾಯನ ಮಾಡಿದ್ದ ಎರಡು ವರ್ಷದ ಹಿಂದಿನ ಪ್ರಕರಣದ ಆರೋಪಿಯೊಬ್ಬ ಭಾರತಕ್ಕೆ ಬಂದಿಳಿದ ಕೂಡಲೇ ಬಂಧಿತನಾಗಿದ್ದಾನೆ. ಕರಾಯ ಗ್ರಾಮದ ಕಲ್ಲೇರಿಯ ನಿವಾಸಿ ದಾವೂದ್ (34) ಎಂಬಾತ ಕಳೆದ 2011ರ ಜೂನ್ 3ರಂದು ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾತ ಬಳಿಕ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಈತನ ನಾಪತ್ತೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಆತ ವಿದೇಶಕ್ಕೆ ಹೋಗಿರುವ ವಿಚಾರ ಗಮನಕ್ಕೆ ಬಂತು. ತಡ ಮಾಡದೇ ಇಂಟರ್‌ಪೋಲ್ ಮುಖಾಂತರ ಅಪರಾಧಿಯ ವಿವರಗಳನ್ನು ಔಟ್ ಲುಕ್ ನೋಟಿಸ್ ನೀಡುವ ಮೂಲಕ ಪೊಲೀಸರು ರಾಷ್ಟ್ರೀಯ ಹಾಗೂ ಅಂತಾರಾಷ್ಟೀಯ ವ್ಯವಸ್ಥೆಯ ನೆರವು ಕೋರಿದ್ದರು. ದುಬಾಯಿಯಲ್ಲಿ ಉದ್ಯೋಗ ಮಾಡಿ ಮೂರು ದಿನಗಳ ಹಿಂದೆ ಸಭ್ಯನಂತೆ ಭಾರತಕ್ಕೆ ಪ್ರಯಾಣ ಬೆಳೆಸಿದ್ದ ದಾವೂದ್ ಮುಂಬಯಿ ವಿಮಾನ ನಿಲ್ದಾಣದಲ್ಲಿ ಕಾಲಿಡುತಿದ್ದಂತೆಯೇ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆತನನ್ನು ಸಹರಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಸಹರಾ ಪೊಲೀಸ್ ಠಾಣೆಯಿಂದ ಬಂದ ಮಾಹಿತಿಯ ಅನುಸಾರ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಮುಂಬಾಯಿಯಲ್ಲಿ ವಶಕ್ಕೆ ತೆಗೆದುಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.