31 ವರ್ಷ ಬಳಿಕ ಬಾಡಿಗೆ ಮನೆ ಖಾಲಿ ಮಾಡಿದ ರಾಜ್ಯಸಭೆ ಮಾಜಿ ಸದಸ್ಯ!
ಮಂಗಳೂರು: ರಾಜ್ಯಸಭೆ ಸದಸ್ಯರಾಗಿದ್ದ ಬಿ. ಇಬ್ರಾಹಿಂಗೆ 31 ವರ್ಷಗಳ ಹಿಂದೆ ಬಾಡಿಗೆ ಮನೆ ನೀಡಿದ ಯೇನೆಪೋಯ ಅಬ್ದುಲ್ ಕುಂಞ ಸುಪ್ರೀಂ ಕೋರ್ಟ್‌ಗೆ ತೆರಳಿ ಮನೆ ವಾಪಸ್ ಪಡೆದಿದ್ದಾರೆ.
1982ರಲ್ಲಿ ಇಬ್ರಾಹಿಂ ಅವರ ಕಡು ಬಡತನ ಕಂಡು ಕುಲಶೇಖರದ 12 ಸೆಂಟ್ಸ್‌ನಲ್ಲಿ ಮನೆಯನ್ನು ತಿಂಗಳ 200 ಬಾಡಿಗೆ ನೀಡಿದ್ದರು. 6 ತಿಂಗಳ ಒಳಗೆ ಖಾಲಿ ಮಾಡುವುದಾಗಿ ಹೇಳಿದ್ದ ಇಬ್ರಾಹಿಂ ಮನೆ ಬಿಡಲು ಒಪ್ಪಲೇ ಇಲ್ಲ. ಯೇನೆಪೋಯ ಅಬ್ದುಲ್ ಕುಂಞ ಎಷ್ಟೇ ಪ್ರಯತ್ನ ಪಟ್ಟರೂ ಮನೆ ಬಿಡಿಸಲು ಸಾಧ್ಯವಾಗಲೇ ಇಲ್ಲ.
2004ರಲ್ಲಿ ಯೇನೆಪೋಯ ಅವರು ಇಬ್ರಾಹಿಂ ವಿರುದ್ಧ ಮಂಗಳೂರು ಮುನ್ಸಿಪ್ ಕೋರ್ಟ್‌ನಲ್ಲಿ ದಾವೆ ಹೂಡಿದರು. ಹೈಕೋರ್ಟ್‌ವರೆಗೆ ಎಲ್ಲ ನ್ಯಾಯಾಲಯಗಳು ಮನೆ ಖಾಲಿ ಮಾಡುವಂತೆ ಆದೇಶ ನೀಡಿದವು. ಇದನ್ನು ಪ್ರಶ್ನಿಸಿ ಇಬ್ರಾಹಿಂ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. 2013ರ ಏಪ್ರಿಲ್‌ನಲ್ಲಿ ಮನೆ ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಕೂಡಾ ಆದೇಶಿಸಿತು. ಅಫಿದವತ್ ಸಲ್ಲಿಸಿದ 4 ವಾರದ ಒಳಗೆ ಮನೆ ಖಾಲಿ ಮಾಡಲು ಷರತ್ತು ವಿಧಿಸಿತು.
ಇಬ್ರಾಹಿಂ ಅಫಿದವಿತ್ ಸಲ್ಲಿಸಲೇ ಇಲ್ಲ. ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡುವ ಅದೇಶ ನೀಡುವಂತೆ ಯೇನೆಪೋಯ ಅಬ್ದುಲ್ ಕುಂಞ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ವಾರಂಟ್ ಹೊರಡಿಸಿತು. ಇಬ್ರಾಹಿಂ ತಾನಾಗಿಯೇ ಮನೆ ಬೀಗ ಕೀಲಿ ಕೈ ಕೋರ್ಟ್‌ಗೆ ಒಪ್ಪಿಸಿದರು. ಮಂಗಳೂರು ಗ್ರಾಮಾಂತರ ಪೊಲೀಸರ ಮೂಲಕ ಮನೆ ಬೀಗ ಮುರಿದು ಮನೆಯನ್ನು ಅಬ್ದುಲ್ ಕುಂಞಗೆ ಹಸ್ತಾಂತರಿಸಲಾಯಿತು.