ಜಳಕದ ಹೊಳೆ-ಕೋಟೆಗುಡ್ಡೆ ರಸ್ತೆ ಕಡಿತ ಭೀತಿ
ಸುಬ್ರಹ್ಮಣ್ಯ: ಜಳಕದ ಹೊಳೆ- ಕೋಟೆಗುಡ್ಡೆ ರಸ್ತೆಯ ಕಂರ್ಬಿ ಎಂಬಲ್ಲಿ ಸೇತುವೆಗೆ ತಾಗಿ ತಡೆಗೋಡೆ ಇಲ್ಲದಿರುವುದರಿಂದ ಸೇತುವೆಗೆ ತಾಗಿರುವ ಸ್ಥಳದಲ್ಲಿ ಎರಡೂ ಬದಿಯಲ್ಲಿ ಕುಸಿದಿದೆ. ಇನ್ನಷ್ಟು ಕುಸಿದರೆ ಕೋಟೆಗುಡ್ಡೆ ಕಡೆಗೆ ಸಂಪರ್ಕ ರಸ್ತೆಯೇ ಇಲ್ಲದಂತಾಗುವ ಭೀತಿ ಎದುರಾಗಿದೆ. ಸೇತುವೆಯಾಚೆಗೆ ಕಂರ್ಬಿ, ನೆಕ್ರಜೆ, ಮುಕ್ಕುಡ, ಪಂಬೆತ್ತಾಡಿ ಮೊದಲಾದ ಪ್ರದೇಶಗಳಿವೆ. ಎರಡು ವರುಷಗಳ ಹಿಂದೆ ನಿರ್ಮಾಣವಾಗಿದ್ದು, ಸೇತುವೆಯ ಬದಿಗೆ ತಡೆಗೋಡೆ ರಚಿಸದಿರುವುದರಿಂದ ಕುಸಿತಕ್ಕೆ ಕಾರಣವಾಗಿದೆ.
ಸೇತುವೆ ಬಳಿ ರಸ್ತೆಯ ಇಕ್ಕೆಲಗಳಲ್ಲಿ ಕುಸಿತವು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಸೇತುವೆಯ ಸಮೀಪ ಕೆಸರುಮಯವಾಗಿದ್ದು, ಆ ಭಾಗದ ಜನ ವಾಹನ ಸಂಚಾರಕ್ಕೆ ತೊಂದರೆ ಪಡುವಂತಾಗಿದೆ. ಕೋಟೆಗುಡ್ಡೆಯಲ್ಲಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರವಿದೆ. ನಿತ್ಯ ಇದುವೇ ರಸ್ತೆಯಾಗಿ ಶಾಲಾ ಮಕ್ಕಳು ಸೇರಿದಂತೆ ನೂರಾರು ಜನ ಪಂಜದ ಕಡೆ ಬರುತ್ತಾರೆ. ಜನಪ್ರತಿನಿಧಿಗಳು, ಇಲಾಖೆಗಳು ಸಮಸ್ಯೆ ಸರಿಪಡಿಸಬೇಕಾಗಿದೆ.