ತೊಟ್ಟಿಲಗುರಿ ಘಟನೆಗೆ ಅಧಿಕಾರಿಗಳೇ ಕಾರಣ: ದಲಿತ ಸಂಘಟನೆ ಆರೋಪ
ಮಂಗಳೂರು: ಬಜ್ಪೆ ತೊಟ್ಟಿಲಗುರಿಯಲ್ಲಿ ಕಾಂಪೌಂಡ್ ಕುಸಿದು ನಾಲ್ವರು ಮೃತಪಟ್ಟ ಘಟನೆಗೆ ಅಧಿಕಾರಿಗಳೇ ಕಾರಣ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ತೊಟ್ಟಿಲಗುರಿ 3 ಎಕರೆ ಸರ್ಕಾರಿ ಜಾಗದಲ್ಲಿ ಕಳೆದ 20 ವರ್ಷಗಳಿಂದ 18 ಕುಟುಂಬಗಳು ವಾಸವಾಗಿದೆ. ಇಲ್ಲಿ ಉಳಿದಿರುವ ಸರ್ಕಾರಿ ಜಾಗವನ್ನು ಸ್ಥಳೀಯರು ಮತ್ತು ಹೊರಗಿನವರು ಅಕ್ರಮವಾಗಿ ಸ್ವಾಧೀನಪಡಿಸಿದ್ದು, ವಾಣಿಜ್ಯ ಸಂಕಿರ್ಣವನ್ನು ನಿರ್ಮಿಸಿದ್ದಾರೆ. ಕಟ್ಟಡ ನಿರ್ಮಾಣದಿಂದ ಇತರ ಮನೆಗಳಿಗೆ ಆಗುತ್ತಿರುವ ತೊಂದರೆಯ ಕುರಿತು ಅಂದಿನ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರಿಗೆ ಮನವಿ ಮಾಡಲಾಗಿತ್ತು. ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ದುರ್ಘಟನೆ ನಡೆದಿದೆ. ಈ ಪ್ರಕರಣವನ್ನು ದಲಿತ ದೌರ್ಜನ್ಯ ಕಾಯ್ದೆಯಡಿ ದಾಖಲಿಸಬೇಕು ಎಂದು ಸಮಿತಿಯ ಜಿಲ್ಲಾ ಸಂಚಾಲಕ ಎಂ. ಚಂದ್ರಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಲಿತ ಅಭಿವೃದ್ಧಿ ವೇದಿಕೆಯ ಸಂಚಾಲಕ ಅಶೋಕ್ ಕೊಂಚಾಡಿ ಮಾತನಾಡಿ, ದುರ್ಘಟನೆಯಲ್ಲಿ ಮೃತರಿಗೆ ನೀಡಿದ ಪರಿಹಾರ ಮೊತ್ತವನ್ನು ರು. 5ಲಕ್ಷಕ್ಕೆ ಏರಿಸಬೇಕು. ಘಟನೆಯ ತನಿಖೆಗೆ ಮುಖ್ಯಮಂತ್ರಿ ಮಧ್ಯ ಪ್ರವೇಶಿಸಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ಮನೆ ಪುನರ್ ನಿರ್ಮಾಣದ ಜತೆಗೆ ಗುಣಮಟ್ಟದ ಮನೆ ಹಾಗೂ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು. ಗಾಯಗೊಂಡವರ ಸಂಪೂರ್ಣ ಚಿಕಿತ್ಸೆ ವೆಚ್ಚ ಸರ್ಕಾರ ಭರಿಸಬೇಕು. ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲವಾದಲ್ಲಿ ಎಲ್ಲ ದಲಿತ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.