ಬೀಡಿ ಬ್ರಾಂಚ್ಗೆ ತೆರಳಿದ ಯುವತಿ ನಾಪತ್ತೆ
ಉಪ್ಪಿನಂಗಡಿ: ಇಲ್ಲಿನ ಕೊಪ್ಪಳ ಮನೆ ನಿವಾಸಿ ದಿ. ಕೃಷ್ಣಪ್ಪ ಪೂಜಾರಿ ಎಂಬವರ ಮಗಳು ದೇವಕಿ (27) ಬೀಡಿ ಬ್ರಾಂಚಿಗೆ ಹೋಗಿ ಬರುವುದಾಗಿ ಹೋದಾಕೆ ನಾಪತ್ತೆಯಾಗಿದ್ದಾಳೆಂದು ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ ಬೆಳಗ್ಗೆ ಎಂದಿನಂತೆ ಪೆರಿಯಡ್ಕದ ಬೀಡಿ ಬ್ರಾಂಚಿಗೆ ಹೋಗಿರುವವಳು ಹಿಂತಿರುಗಿ ಬರಲಿಲ್ಲ ಎನ್ನಲಾಗಿದೆ. ಕಾಣೆಯಾಗುವ ವೇಳೆ ಚೂಡಿದಾರ ಧರಿಸಿದ್ದ ಈಕೆ, 7ನೇ ತರಗತಿವರೆಗೆ ಕಲಿತಿದ್ದು, ಕನ್ನಡ, ತುಳು ಭಾಷೆ ಮಾತನಾಡಬಲ್ಲಳು. ಸುಮಾರು 5 ಅಡಿ ಎತ್ತರ ವಿರುವ ಈಕೆಯನ್ನು ಯಾರಾದರೂ ಕಂಡರೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ (08251-251055) ಮಾಹಿತಿ ನೀಡಬೇಕೆಂದು ಉಪ್ಪಿನಂಗಡಿ ಪೊಲೀಸರು ವಿನಂತಿಸಿದ್ದಾರೆ. ದೇವಕಿ ತಾಯಿ ದುಗ್ಗಮ್ಮ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ನಾಪತ್ತೆ: ದೂರು
ಬೈಂದೂರು: ಇಲ್ಲಿನ ಪಡುವರಿ ಗ್ರಾಮದ ದೊಂಬೆ ಎಂಬಲ್ಲಿ ಮಹಿಳೆ ಕಾಣೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾಣೆಯಾದವರು ರೇಣುಕಾ (24). ಅವರು ಮೇ 31ರಂದು ಪಡುವರಿ ಗ್ರಾಮದ ದೊಂಬೆ ಕುಮ್ಟಿಮನೆ ಎಂಬಲ್ಲಿಂದ ಉಪ್ಪುಂದ ಗ್ರಾಮದಲ್ಲಿರುವ ಔಷಧಿ ಅಂಗಡಿಗೆ ಹೋಗುವುದಾಗಿ ತನ್ನ 1 ವರ್ಷದ ಅಂಗವಿಕಲ ಮಗುವನ್ನು ಕರೆದುಕೊಂಡು ಹೋದವರು ಇದುವರೆಗೂ ವಾಪಾಸು ಮನೆಗೆ ಬಂದಿಲ್ಲ, ಸಂಬಂಧಿಕರ ಮನೆಗೂ ಹೋಗಿಲ್ಲ ಎಂದು ಮಂಜುನಾಥ ಖಾರ್ವಿ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕುಸಿದು ಬಿದ್ದು ವ್ಯಕ್ತಿ ಸಾವು: ಕೊಲೆ ಶಂಕೆ
ಕಾರ್ಕಳ: ಮುದ್ರಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಬುಧವಾರ, ಕುಸಿದು ಬಿದ್ದು ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಇರ್ವತ್ತೂರು ನಿವಾಸಿ ಜನಾರ್ದನ ದೇವಾಡಿಗ (55) ಮೃತರು. ಬುಧವಾರ, ಕುಸಿದು ಬಿದ್ದು ಅಜೆಕಾರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು. ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಇವರ ಮೊದಲ ಪತ್ನಿಯ ಮಗ ರಾಮಕೃಷ್ಣ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈತ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿ ತಿಳಿಸಿದೆ.
ಯುವತಿ ನಾಪತ್ತೆ: ದೂರು
ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಮನೆ ಶಿವಣ್ಣ ಗೌಡರ ಪುತ್ರಿ ವನಿತಾ (23) ಜೂ.13ರಂದು ಪೇಟೆಗೆ ಸಾಮಾನು ತರಲು ಹೋದವರು ಮತ್ತೆ ಮನೆಗೆ ಹಿಂದುರುಗಿ ಬಂದಿಲ್ಲ ಎಂದು ಯುವತಿಯ ಸಹೋದರ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.