ಸತತ ಮಳೆ: ಮನೆಗಳ ಗೋಡೆ ಕುಸಿತ
ಉಪ್ಪಿನಂಗಡಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಗೆ ಬುಧವಾರ ಉಪ್ಪಿನಂಗಡಿ ಪರಿಸರದಲ್ಲಿ ಎರಡು ಮನೆಗಳ ಗೋಡೆ ಕುಸಿದಿದಿದ್ದು, ಸಾವಿರಾರು ರುಪಾಯಿ ನಷ್ಟ ಸಂಭವಿಸಿದೆ.
ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮದ ಹೊಸಮಜಲು ಜುಬೈದ್ ವಾಸ್ತವ್ಯದ ಮನೆಯ ಹಿಂದಿನ ಗೋಡೆ ಕುಸಿದಿದೆ. ಘಟನೆಯಿಂದ ಸುಮಾರು ರು. 25 ಸಾವಿರ ನಷ್ಟ ಸಂಭವಿಸಿದೆ. ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೇರಿ ಬಲ್ಲಿ ಎಂ.ಯು. ಸಬಾಸ್ಟೀನ್ ವಾಸ್ತವ್ಯದ ಮನೆ ಹಿಂದಿನ ಅಡುಗೆ ಕೋಣೆಯ ಗೋಡೆ ಕುಸಿದು ಬಿದ್ದಿದೆ.
ಘಟನೆ ವೇಳೆ ಸಬಾಸ್ಟೀನ್ರ ಪತ್ನಿ ರೋಸಮ್ಮ ಅಡುಗೆ ಮಾಡುತ್ತಿದ್ದು, ಸ್ವಲ್ಪ ಗಾಯಗೊಂಡಿದ್ದಾರೆ. ಘಟನೆಯಿಂದಾಗಿ ಸುಮಾರು ರು. 28 ಸಾವಿರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ನೆಲ್ಯಾಡಿ ಗ್ರಾಮಕರಣಿಕ ಅಶೋಕ್ ಕುಮಾರ್, ನೆಲ್ಯಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಪಂಚಾಯಿತಿ ಪ್ರಭಾರ ಪಿ.ಡಿ.ಒ. ದೇವರಾಜು ಎಂ., ಗ್ರಾಮ ಸಹಾಯಕ ಮಾಯಿಲಪ್ಪ ಗೌಡ ಭೇಟಿ ನೀಡಿದರು.
--