ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹರಕೆ ತೀರಿಸಲು ಉಮ್ರಾ ಯಾತ್ರೆಗೆ ಖಾದರ್

Rashmi Kasaragodu
Updated On : 21 Jun 2013, 12:40 pm

ಜಿತೇಂದ್ರ ಕುಂದೇಶ್ವರ
ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಆರೋಗ್ಯ ಸಚಿವರಾಗಿರುವ ಯು.ಟಿ. ಖಾದರ್ ಕುಟುಂಬ ಸಮೇತ ಹರಕೆಯ ಮೆಕ್ಕಾ ಮದೀನಾ ಉಮ್ರಾ ಯಾತ್ರೆ ಕೈಗೊಂಡಿದ್ದಾರೆ.
 ಶುಕ್ರವಾರ ಬೆಳಗ್ಗೆ ಮುಂಬೈನಿಂದ ಪ್ರಯಾಣ ಬೆಳೆಸುವ ಸಚಿವರ ಕುಟುಂಬ ಜೂ.27ರಂದು ವಾಪಸ್ ಆಗಲಿದೆ. ಚುನಾವಣೆಗೆ ಮುನ್ನ ಮೆಕ್ಕಾ, ಮದೀನಾ ಯಾತ್ರೆಯನ್ನು ಖಾದರ್ ಕುಟುಂಬ ಸಮೇತರಾಗಿ ಕೈಗೊಂಡಿದ್ದರು. ಆಗ ಲಕ್ಷಾಂತರ ಜನರ ನಡುವೆ ಖಾದರ್ ಮಗಳು ಕಳೆದು ಹೋಗಿದ್ದಳು. ಮಗಳು ಸಿಕ್ಕರೆ, ಶಾಸಕರಾಗಿ ಗೆದ್ದರೆ ಮತ್ತೆ ಮೆಕ್ಕಾ, ಮದೀನಾ ಯಾತ್ರೆ ಕೈಗೊಳ್ಳುವುದಾಗಿ ಖಾದರ್ ಅಂದೇ ಹರಕೆ ಹೊತ್ತಿದ್ದರು.  
 ಮುಸ್ಲಿಮರ ಪವಿತ್ರ ಕ್ಷೇತ್ರ ಸೌದಿ ಅರೆಬಿಯಾದ ಮೆಕ್ಕಾ ಮದೀನಾಕ್ಕೆ ಹೊಗಬೇಕೆಂಬುದು ಎಲ್ಲ ಮುಸ್ಲಿಂ ಬಾಂಧವರ ಜೀವನದ ಪರಮ ಗುರಿ. ಬಕ್ರೀದ್ ವೇಳೆ ಭೇಟಿ ನೀಡಿದರೆ ಹಜ್ ಯಾತ್ರೆ ಎನ್ನುತ್ತಾರೆ, ಉಳಿದ ದಿನಗಳಲ್ಲಿ ತೆರಳಿದರೆ ಹರಕೆಯ ಉಮ್ರಾ ಯಾತ್ರೆ.
ಗೆದ್ದರೆ ಹರಕೆ: 'ಎರಡು ಬಾರಿ ಉಮ್ರಾ ಯಾತ್ರೆಗೆ ಹೋಗಿ ಬಂದಿದ್ದೇನೆ. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ಏಪ್ರಿಲ್ನಲ್ಲಿ ಕುಟುಂಬ ಸಮೇತ ಮೆಕ್ಕಾ, ಮದೀನಾ ಯಾತ್ರೆ ಕೈಗೊಂಡಿದ್ದೆ. ಕ್ಷೇತ್ರದಲ್ಲಿ ಗೆದ್ದು ಬರಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದೆ. ನನ್ನ ಮಗಳು ಮೆಕ್ಕಾದಲ್ಲಿ ತಪ್ಪಿಸಿಕೊಂಡಿದ್ದಳು. ಲಕ್ಷಾಂತರ ಜನರ ಮಧ್ಯೆ ಹುಡುಕುವುದೇ ಕಷ್ಟ ಮತ್ತು ನೋವಿನ ಸಂಗತಿ. ಮಗಳು ಸಿಕ್ಕಿದರೆ ಮತ್ತೆ ಉಮ್ರಾ ಯಾತ್ರೆ ಮಾಡುವುದಾಗಿ ಸಂಕಲ್ಪ ಮಾಡಿದ್ದೆ. 3 ಗಂಟೆಗಳ ಸತತ ಹುಡುಕಾಟದಿಂದ ನನ್ನ ಮಗಳು ಪಾಕಿಸ್ತಾನಿ ಕುಟುಂಬದ ಜತೆ ಸುರಕ್ಷಿತವಾಗಿ ಸಿಕ್ಕಳು. ಅಲ್ಲದೇ ಶಾಸಕನಾಗಿ ಗೆದ್ದರೆ ಯಾತ್ರೆ ಮಾಡುವುದಾಗಿ ಹೇಳಿ ಕೊಂಡಿದ್ದೆ. ಅದರಂತೆ ಪತ್ನಿ, ಮಗಳ ಜತೆ ಮತ್ತೆ ಯಾತ್ರೆ ಕೈಗೊಂಡಿದ್ದೇನೆ', ಎಂದಿದ್ದಾರೆ ಸಚಿವ ಖಾದರ್.


ಉಮ್ರಾ ಯಾತ್ರೆ, ಹಜ್ ಯಾತ್ರೆ
ಮೆಕ್ಕಾ ಮತ್ತು ಮದೀನಾ ಯಾವತ್ತೂ ಬಾಗಿಲು ಮುಚ್ಚದ ಧಾರ್ಮಿಕ ಕ್ಷೇತ್ರ. ಮುಸ್ಲಿಮರಿಗೆ ಮಾತ್ರ ಪ್ರವೇಶವಿರುವ ಇಲ್ಲಿ 24 ಗಂಟೆಗಳೂ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಳಿ ಬಣ್ಣದ ಧೋತಿ, ಶಾಲು ಧರಿಸಿಯೇ ಇಲ್ಲಿಗೆ ತೆರಳಬೇಕು. ಬಕ್ರೀದ್ ಸಂದರ್ಭದಲ್ಲಿ ತೆರಳುವ ಹಜ್ ಯಾತ್ರೆಗೆ ಒಂದು ತಿಂಗಳು ಬೇಕಾಗುತ್ತದೆ.


ಹಜ್ ಯಾತ್ರೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕು. ಈ ಯಾತ್ರೆ ಮಾಡಿದರೆ ಪಾಪ ಕ್ಷಯವಾಗಿ ಮುಗ್ಧ ಮಗುವಿನಂತಾಗುತ್ತಾನೆ ಮನುಷ್ಯ ಎನ್ನುವುದು ಪ್ರತೀತಿ.
ಟಿ ಅಬ್ಬಾಸ್, ವೇಣೂರು ನಿಟ್ಟಡೆ ಉದ್ಯಮಿ

ರಾಜ್ಯದಲ್ಲಿ ಆರೋಗ್ಯ ಸಮಸ್ಯೆಗಳಿವೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಂಜಾನ್ ಬಂದರೆ ಹಜ್ನಲ್ಲಿ ವಿಪರೀತ ಯಾತ್ರಿಗಳಿರುತ್ತಾರೆ. ಬಜೆಟ್ ಮಂಡನೆಯಾದ ಬಳಿಕ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೆ ತರುವ ಒತ್ತಡಗಳಿರುತ್ತವೆ. ರಾಜ್ಯದ 6 ಕೋಟಿ ಕನ್ನಡಿಗರ ಒಳಿತಿಗಾಗಿ ಪವಿತ್ರ ಕ್ಷೇತ್ರದಲ್ಲಿ ಪ್ರಾರ್ಥಿಸುತ್ತೇನೆ.
ಟಿ ಯು.ಟಿ. ಖಾದರ್, ಆರೋಗ್ಯ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement