ಜು.8ಕ್ಕೆ ಬಾಗ್ದಾದ್ ಭೇಟಿ: ಸಚಿವ ವೀರಪ್ಪ ಮೊಯ್ಲಿ
ಮಂಗಳೂರು: ಭಾರತಕ್ಕೆ ಪೆಟ್ರೋಲಿಯಂ ಆಮದು ಬಗ್ಗೆ ಚರ್ಚಿಸಲು ಬಾಗ್ದಾದ್ಗೆ ಜು.8ರಂದು ಭೇಟಿ ನೀಡುವುದಾಗಿ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತಕ್ಕೆ ಇಂಧನ ನೀಡುವುದಾಗಿ ಇರಾಕ್ ಸರ್ಕಾರ ಹೇಳಿದ ಹಿನ್ನೆಲೆಯಲ್ಲಿ ಈ ಬಗ್ಗೆ ಎರಡು ದಿನಗಳ ಭೇಟಿ ನೀಡಲಿದ್ದೇನೆ. ಭಾರತಕ್ಕೆ ಶೇ.80 ಇಂಧನ ವಿದೇಶದಿಂದಲೇ ಆಮದಾಗುತ್ತಿದೆ. ಶೇ.20 ಸ್ಥಳೀಯ ಇಂಧನ ಮೂಲಗಳು ಆದ್ದರಿಂದ ಆಮದು ಮಾಡುವುದು ಅನಿವಾರ್ಯ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶಿರಾಡಿಯಲ್ಲಿ ಹೆದ್ದಾರಿ ಸುರಂಗ ಮಾರ್ಗವಾಗಿ ನಿರ್ಮಿಸುವ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. 2 ವರ್ಷದ ಹಿಂದೆ ಹೇಳಿದ ಚೆನ್ನೈ- ಬೆಂಗಳೂರು ಹೈವೆ ಕಾರಿಡಾರ್ ಯೋಜನೆಯನ್ನು ಪರಿಶೀಲಿಸಲಾಗಿದೆ. ಬಜೆಟ್ನಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದ ಕೊಲ್ಲೂರು- ಹೆಬ್ರಿ- ಕಾರ್ಕಳ- ಉಪ್ಪಿನಂಗಡಿ ರೈಲು ಮಾರ್ಗ ಸಮೀಕ್ಷೆ ಮತ್ತು ಪಡುಬಿದ್ರಿ- ಕಾರ್ಕಳ- ಮೂಡುಬಿದಿರೆ- ವೇಣೂರು ರೈಲು ಮಾರ್ಗ ಸಮೀಕ್ಷೆ ಇಲಾಖೆಗಳ ಸಂವಹನ ಕೊರತೆಯಿಂದ ನೆನೆಗುದಿಗೆ ಬಿದ್ದಿತ್ತು, ಸಂವಹನ ಸರಿಪಡಿಸಲಾಗಿದ್ದು, ಮತ್ತೆ ಸಮೀಕ್ಷೆ ಚಾಲನೆ ನೀಡಲು ಸೂಚಿಸಲಾಗಿದೆ ಎಂದರು.