ಆಹಾರ ಕಿತ್ತುಕೊಂಡರು, ಎಂಜಲನ್ನ ತಿಂದರು!
ಮಂಗಳೂರು: ದಾರಿಯುದ್ಧಕ್ಕೂ ನಿರಾಶ್ರಿತ ಯಾತ್ರಿಕರು. ಹಸಿವಿನಿಂದ ಕಂಗಾಲಾಗಿ ಕಾಣುವ ಹಸಿದ ಮುಖ. ದಿನಸಿ ಸಾಮಗ್ರಿ ಕಂಡರೆ ಕೈಹಾಕಿ ಎಳೆದುಕೊಳ್ಳುವ ಮಂದಿ. ಮಾತ್ರವಲ್ಲ ತಿನ್ನುವ ತಟ್ಟೆಯಿಂದ ಸೆಳೆಯಲು ಪ್ರಯತ್ನಿಸಿದರೆ, ಇನ್ನೊಂದೆಡೆ ಬಿಸಾಡಿದ ಎಂಜಲನ್ನೇ ಹಸಿದ ಹೊಟ್ಟೆಗೆ ಇಳಿಸುವ ದಾರುಣ ಸಂಕಷ್ಟ...!
-ಇದು ಮಂಗಳೂರಿನ ನಿರ್ಮಾಲಾ ಟ್ರಾವೆಲರ್ಸ್ನ 6 ಸಿಬ್ಬಂದಿ ಎದುರಿಸಿದ ಬವಣೆ.
ತಮ್ಮನ್ನೇ ನಂಬಿ ಬಂದ ಕರ್ನಾಟಕದ 70 ಯಾತ್ರಿಕರನ್ನು ಪೋಷಿಸುವ ಜವಾಬ್ದಾರಿ ಇವರಿಗೆ. ಒಂದಿಷ್ಟು ಸಿಕ್ಕಿದ ಆಹಾರವನ್ನು ತನ್ನ ಯಾತ್ರಿಕರಿಗೆ ನೀಡೋಣ ಎಂದರೆ ಹಸಿದ ಹೊಟ್ಟೆಯಲ್ಲಿರುವ ಇತರೆ ಯಾತ್ರಿಕರ ಆರ್ತನಾದ. ರಾಜ್ಯ ತಂಡದಲ್ಲಿ ರಕ್ತದೊತ್ತಡ, ಸಿಹಿ ಮೂತ್ರ ತೊಂದರೆಯವರೂ ಇದ್ದರು. ಇವರನ್ನು ನೋಡಿಕೊಳ್ಳುವ ಜತೆಗೆ ಆಹಾರ ಸಾಮಗ್ರಿಗೆ ಮುಗಿಬೀಳುವವರನ್ನು ಸಂತೈಸಬೇಕು. ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲೂ ಈ ಸಿಬ್ಬಂದಿ ಯಾತ್ರಿಕರನ್ನು ಕ್ಷೇಮವಾಗಿ ಮನೆಗೆ ತಲುಪಿಸುವಲ್ಲಿ ಜವಾಬ್ದಾರಿ ತೋರಿಸಿದ್ದಾರೆ.
ಆಹಾರಕ್ಕೆ ಮುಗಿಬಿದ್ದರು: ಜೂ.18ರಂದು ಕೇದಾರನಾಥ ಶಿಖರದಿಂದ ಮೂರ್ನಾಲ್ಕು ಕಿಮೀ ಕಡಿದಾದ ಹಾದಿಯಲ್ಲಿ ಹೆಣಗಳ ಮಧ್ಯೆ ತುಳಿದುಕೊಂಡು ಕಂದಕಕ್ಕೆ ಬೀಳದಂತೆ ಪ್ರಾಣವನ್ನು ಒತ್ತೆಯಿಟ್ಟು ಈ 6 ಮಂದಿ ಕೆಳಭಾಗಕ್ಕೆ ಬಂದು ಅಳಿದುಳಿದ ದಿನಸಿ ಸಾಮಗ್ರಿ ಮೇಲಕ್ಕೆ ತೆಗೆದುಕೊಂಡು ಬರಲು ಪಟ್ಟಪಾಡು ಅಷ್ಟಿಷ್ಟಲ್ಲ. ಯಾಕೆಂದರೆ ದಾರಿಯುದ್ದಕ್ಕೂ ನಿರಾಶ್ರಿತರಾಗಿರುವ ಯಾತ್ರಿಕರು, ಯಾರದೇ ಕೈಯಲ್ಲಿ ಆಹಾರ ಸಾಮಗ್ರಿ ಕಂಡರೆ ಸಾಕು ಎಳೆದುಬಿಡುತ್ತಿದ್ದರು.
ಹಿಂದಿನ ದಿನ ತಂಗಿದ್ದ ಹೊಟೇಲ್ಗೆ ನೀರು ನುಗ್ಗಿದರೂ ಆಹಾರ ಸಾಮಗ್ರಿಗೆ ತೊಂದರೆ ಆಗಿರಲಿಲ್ಲ. ಅದನ್ನು ಎತ್ತಿಕೊಂಡು ಶಿಖರ ಏರಬೇಕಾದರೆ ದಾರಿಯಲ್ಲಿ ಸಂತ್ರಸ್ತರು ಆಹಾರ ಬೇಡುತ್ತಿರುವ ದೃಶ್ಯ. ಆಹಾರ ಕೊಡುವಂತೆ ಇಲ್ಲ, ಕೊಡದೆಯೂ ಸಾಧ್ಯವಿಲ್ಲದ ಪರಿಸ್ಥಿತಿ. 'ಕೆಲವರು ಆಹಾರ ಕಿತ್ತುಕೊಳ್ಳಲು ಬರುತ್ತಿದ್ದರು. ಹೇಗೋ ಅವರಿಂದ ಪಾರಾಗಿ ಮೇಲೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಕಿರಿದಾದ ದಾರಿಯಲ್ಲಿ ಭಯಭೀತ ಯಾತ್ರಿಕರು ಗೊತ್ತು ಗುರಿಯಿಲ್ಲದೆ ಇದ್ದರೆ, ಕಾಲ್ತುಳಿತಕ್ಕೆ ಸಿಲುಕಿ ಕೆಲವರು ಪ್ರಪಾತಕ್ಕೆ ಉರುಳುತ್ತಿದ್ದರು. ಇಂಥ ಸನ್ನಿವೇಶನದಲ್ಲಿ ಆಹಾರ ಸಾಮಗ್ರಿ ಮೇಲ್ಭಾಗಕ್ಕೆ ಹೊತ್ತುಕೊಂಡು ಹೋಗುವುದು ಸವಾಲಾಗಿತ್ತು' ಎನ್ನುತ್ತಾರೆ ಟೂರ್ ಮ್ಯಾನೇಜರ್ ನಾರಾಯಣ.
ಎಂಜಲನ್ನ ತಿಂದರು: ಶಿಖರದಲ್ಲಿರುವ ಹೊಟೇಲ್ ಮಾಲೀಕರ ಮನೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ಸಿಕ್ಕಿತು. ಮೂರು ಕೋಣೆಯಲ್ಲಿ 69 ಮಂದಿ. 5 ದಿನ ಅಲ್ಲೇ ಇರಬೇಕು ಎಂದು ನಿರೀಕ್ಷಿಸಿರಲಿಲ್ಲ. ಒಬ್ಬರಿಗೆ ಸುಸ್ತಾದಾಗ ಇನ್ನೊಬ್ಬರು ಮಲಗಬೇಕಿತ್ತು. ಅಲ್ಲಿ ಸೀಮೆಎಣ್ಣೆ ಸ್ಟೌನಿಂದ ಅನ್ನ, ದಾಲ್ ತಯಾರಿಸುತ್ತಿದ್ದೆವು. ಸಂತ್ರಸ್ತರು ಮನೆಗೆ ಮುತ್ತಿಗೆ ಹಾಕಿ ಆಹಾರಕ್ಕೆ ಬೇಡುತ್ತಿದ್ದರು. ಊಟ ಮಾಡಿ ಉಳಿದ ಅಗಳನ್ನು ಬಿಸಾಡಿದರೆ ಎಂಜಲನ್ನವನ್ನೇ ಪಾಲಿಗೆ ಬಂದದ್ದು ಎಂಬಂತೆ ಸಂತ್ರಸ್ತರು ತಿನ್ನುತ್ತಿದ್ದರು. ಈ ದಾರುಣ ಸನ್ನಿವೇಶವನ್ನು ಹೇಳಲು, ಊಹಿಸಲು ಕಷ್ಟವಾಗುತ್ತಿದೆ ಎಂದು ಗದ್ಗದಿತರಾದರು ನಾರಾಯಣ.
ಸಂತ್ರಸ್ತರಿಗೆ ಸಿಗದ ಆಹಾರ: ಜೂ.19ರಂದು ದಾಸ್ತಾನಿದ್ದ ಆಹಾರ ಸಾಮಗ್ರಿ ಖಾಲಿಯಾಯಿತು. ಆಹಾರಕ್ಕೆ ಮತ್ತೆ ಹುಡುಕಲು ಶುರು ಮಾಡಿದೆವು. ಇದೇ ವೇಳೆ ರಕ್ಷಣಾ ಹೆಲಿಕಾಪ್ಟರ್ನಲ್ಲಿ ಆಹಾರ ಪೊಟ್ಟಣಗಳನ್ನು ಬಿಸಾಡಿದರೂ ಅದು ಸಂತ್ರಸ್ತರ ಬದಲು ಕುದುರೆ ಸಾಗಾಟ, ಡೋಲಿ ಹೊರುವ ನೇಪಾಳಿಗರ ಕೈಸೇರುತ್ತಿತ್ತು. ಯಾತ್ರಿಕರಿಗೆ ಸಹಾಯ ಮಾಡುವ ಬದಲು ಈ ನೇಪಾಳಿಗಳು ನಮ್ಮ ತಂಡದ ಮೂವರ ಲ್ಯಾಪ್ಟಾಪ್, ಚಿನ್ನಾಭರಣ ದೋಚಿದ್ದರು ಎನ್ನುತ್ತಾರೆ.
ಎಲ್ಲ ಯಾತ್ರಿಗಳನ್ನು ಕ್ಷೇಮವಾಗಿ ವಾಪಾಸ್ ಕಳುಹಿಸಿದ ಬಳಿಕವೇ ಈ 6 ಮಂದಿ ಸಿಬ್ಬಂದಿ ದೆಹಲಿ ರೈಲು ಹತ್ತಿದ್ದಾರೆ. ಇವರೆಲ್ಲ ಜೂ.27ರಂದು ಮಂಗಳೂರಿಗೆ ತಲುಪಲಿದ್ದಾರೆ.
- ಆತ್ಮಭೂಷಣ್