ಶಿಲಾಯುಗ ಸಂಸ್ಕೃತಿಯ ಸಮಾಧಿ ಸ್ಮಾರಕ ಪತ್ತೆ
ಬಂಟ್ವಾಳ: ತಾಲೂಕಿನ ಕನ್ಯಾನದ ಬಳಿಯ ಶಿರಂಕಲ್ಲಿನ ತೋಟದಮೂಲೆ ಎಂಬಲ್ಲಿ ಕಲ್ಲಿನ ಗುಹೆಯೊಂದು ಪತ್ತೆಯಾಗಿದೆ. ಈ ಗುಹೆ ಸುಮಾರು 2000 ವರ್ಷಗಳಿಗೂ ಹಿಂದೆ ತುಳುನಾಡಿನಲ್ಲಿ ವ್ಯಾಪಕವಾಗಿ ಅಸ್ತಿತ್ವದಲ್ಲಿದ್ದ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿ ಸ್ಮಾರಕವೆನ್ನಲಾಗುತ್ತಿದೆ.
ಈ ಗುಹೆಯ ಸಂಶೋಧನೆ ನಡೆಸಿದ ಮೂಡುಬಿದಿರೆಯ ಪ್ರಾಚ್ಯವಸ್ತು ಸಂಶೋಧಕ ಡಾ. ಪುಂಡಿಕಾ ಗಣಪಯ್ಯ ಭಟ್, ಕಲ್ಲಿನಲ್ಲಿ ಕೊರೆದ ಗುಹಾ ಸಮಾಧಿ ಸ್ಮಾರಕಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆಗಳಲ್ಲಿ ಪತ್ತೆಯಾಗಿದ್ದರೂ, ಪ್ರಸ್ತುತ ಬೆಳಕಿಗೆ ಬಂದಿರುವ ಗುಹೆಯ ರಚನೆ ಅವುಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಈ ದೃಷ್ಟಿಯಿಂದ ಇದೊಂದು ಅಪೂರ್ವ ಶೋಧನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಬೆಳಕಿಗೆ ಬಂದಿರುವ ಇಂಥ ಗುಹಾ ಸ್ಮಾರಕಗಳಿಗೆ ಮೇಲ್ಭಾಗದಿಂದ ಪ್ರವೇಶಿಸಲು ವೃತ್ತಾಕಾರದ ದ್ವಾರವಿದೆ. ಈಗ ಪತ್ತೆಯಾಗಿರುವ ಗುಹೆಗೆ ಕೆಳಭಾಗದಿಂದ ಕಿರು ದಾರಿಯೊಂದರ ಮೂಲಕ ಪ್ರವೇಶಿಸಲು ಪೂರ್ವಾಭಿಮುಖವಾಗಿ ಆಯತಾಕಾರದ ದ್ವಾರವಿರುವುದು ವಿಶೇಷ. ಇಂಥ ಗುಹೆಗಳೊಳಗೆ ಬೂದಿ ತುಂಬಿದ ಮಣ್ಣಿನ ಪಾತ್ರೆಗಳೂ ಸೇರಿದಂತೆ ವಿವಿಧ ವಸ್ತುಗಳಿರುವುದು ಸಾಮಾನ್ಯ. ಆದರೆ ಇದಿಗ ಪತ್ತೆಯಾಗಿರುವ ಗುಹೆಯೊಳಗೆ ಅಂಥ ಯಾವುದೇ ವಸ್ತುಗಳು ಕಂಡುಬಂದಿಲ್ಲ.