ಮಂಗಳೂರಲ್ಲಿ 'ಎಜುಕೇಷನ್ ಫೇರ್' ಇಂದು
ಮಂಗಳೂರು: ವೃತ್ತಿಪರ ಕೋರ್ಸ್ಗಳ ಪ್ರವೇಶ ಕುರಿತು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು 'ಕನ್ನಡಪ್ರಭ' ಮತ್ತು 'ಇಂಡಿಯನ್ ಎಕ್ಸ್ಪ್ರೆಸ್' ಹಮ್ಮಿಕೊಂಡ 'ಎಜುಕೇಷನ್ ಫೇರ್' ಜೂ.29ರಂದು ಮಂಗಳೂರಿನಲ್ಲಿ ನಡೆಯಲಿದೆ.
ಇಲ್ಲಿನ ಬಿಜೈ ಚರ್ಚ್ ಹಾಲ್ನಲ್ಲಿ ಬೆಳಗ್ಗೆ 9ಕ್ಕೆ 'ಎಜುಕೇಷನ್ ಫೇರ್'ನ್ನು ಬಿಜೈ ಚರ್ಚ್ ಧರ್ಮಗುರು ವಿಕ್ಟರ್ ಮಚಾದೊ ಉದ್ಘಾಟಿಸುವರು. ರಾಜ್ಯಾದ್ಯಂತ 15 ನಗರಗಳಲ್ಲಿ ಇದನ್ನು ಆಯೋಜಿಸಲಾಗಿದ್ದು, ಮೈಸೂರು ಬಳಿಕ ಮಂಗಳೂರಿನಲ್ಲಿ ನಡೆಯುತ್ತಿರುವುದು ಇದು 2ನೇ 'ಎಜುಕೇಷನ್ ಫೇರ್'.
ಶನಿವಾರ ಸಂಜೆ 6ರವರೆಗೆ ನಡೆಯುವ 'ಎಜುಕೇಷನ್ ಫೇರ್'ನಲ್ಲಿ ಮಂಗಳೂರಿನ 6 ಶಿಕ್ಷಣ ಸಂಸ್ಥೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಸುಮಾರು 30 ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ. ಎಜುಕೇಷನ್ ಫೇರ್ನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಸ್ಟಾಲ್ಗಳು ಇರಲಿದ್ದು, ವಿದ್ಯಾರ್ಥಿಗಳು ಯಾವ ಕೋರ್ಸ್ಗೆ ಸೇರಬಹುದು, ಸಿಇಟಿ ಹೊರತುಪಡಿಸಿ ಬೇರೆ ಬೇರೆ ಕೋರ್ಸ್ಗಳ ಆಯ್ಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
'ಎಜುಕೇಷನ್ ಫೇರ್'ನಲ್ಲಿ ಭಾಗವಹಿಸಿ ಶಿಕ್ಷಣ ಕೋರ್ಸ್ಗೆ ಸೇರ್ಪಡೆ ಬಯಸುವ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯ್ತಿ ಸಿಗಲಿದೆ. ಅಲ್ಲದೆ ಶಿಕ್ಷಣಕ್ಕೆ ಬ್ಯಾಂಕ್ಗಳಿಂದ ಶಿಕ್ಷಣ ಸಂಸ್ಥೆಗಳು ಸಾಲ ಒದಗಿಸಲು ಸಹಕರಿಸಲಿವೆ. ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 10ನೇ ತರಗತಿಯಿಂದ ಮೇಲ್ಪಟ್ಟ ಎಲ್ಲ ಶಿಕ್ಷಣ ಕೋರ್ಸ್ಗಳಿಗೆ ಎಜುಕೇಷನ್ ಫೇರ್ ನೆರವಾಗಲಿದೆ.