ಅಂಬೇಡ್ಕರ್ ಭವನದಲ್ಲಿ ಕಟ್ಟಿಗೆ ರಾಶಿ: ದಲಿತ ಸಂಘರ್ಷ ಸಮಿತಿ ಮುತ್ತಿಗೆ
ಸುಳ್ಯ: ಪಟ್ಟಣದ ಅಂಬೇಡ್ಕರ್ ಭವನವನ್ನು ವ್ಯಕ್ತಿಯೊಬ್ಬರು ಖಾಸಗಿ ಉದ್ದೇಶಕ್ಕಾಗಿ ಬಳಸುತ್ತಿರುವುದನ್ನು ಪ್ರತಿಭಟಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಅಂಬೇಡ್ಕರ್ ಭವನಕ್ಕೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆದಿದೆ.
ಸುಳ್ಯದ ವಿವೇಕಾನಂದ ವೃತ್ತದ ಬಳಿಯಿರುವ ಅಂಬೇಡ್ಕರ್ ಭವನ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದ್ದು, ಕಿಟಿಕಿ ಬಾಗಿಲುಗಳು ಮುರಿದು ಬಿದ್ದಿವೆ. ಈ ಭವನವನ್ನು ಬೀಡಾಡಿ ದನಗಳು, ನಾಯಿಗಳು ಆಶ್ರಯ ತಾಣವನ್ನಾಗಿಸಿಕೊಂಡಿವೆ.
ಪಕ್ಕದಲ್ಲಿರುವ ಹೊಟೇಲ್ ಮಾಲೀಕರೊಬ್ಬರು ಈ ಭವನವನ್ನು ಕಟ್ಟಿಗೆ ದಾಸ್ತಾನು ಕೊಠಡಿಯಾಗಿ ಬಳಸಿಕೊಳ್ಳುತ್ತಿರುವುದರ ಕುರಿತು ಈ ಹಿಂದೆ ಹಲವು ಬಾರಿ ದೂರುಗಳು ಕೇಳಿ ಬಂದಿತ್ತು. ಆದರೆ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್.ಸಿ. ವಿಭಾಗ ಮತ್ತು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ನಾರಾಯಣ ಜಟ್ಟಿಪಳ್ಳ ನೇತೃತ್ವದಲ್ಲಿ ಮುತ್ತಿಗೆ ಹಾಕಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ವೇಣುಗೋಪಾಲ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ಕಟ್ಟಿಗೆ ಇರಿಸಿದ್ದ ಹೊಟೇಲ್ ಮಾಲೀಕರನ್ನು ಸ್ಥಳಕ್ಕೆ ಕರೆಸಿದ ತಹಸೀಲ್ದಾರ್, ತಕ್ಷಣವೇ ಕಟ್ಟಿಗೆ ತೆರವುಗೊಳಿಸಿ ಕೊಠಡಿಯನ್ನು ಶುಚಿಗೊಳಿಸುವಂತೆ ನಿರ್ದೇಶನ ನೀಡಿದರು.
ದಲಿತ ಸಂಘದ ಸಮಿತಿ ಜಿಲ್ಲಾ ಸಂಚಾಲಕ ವಿಶ್ವನಾಥ ಅಲೆಕ್ಕಾಡಿ, ಅಚ್ಚುತ ಮಲ್ಕಜೆ, ಲಕ್ಷ್ಮೀ ಸುಬ್ರಹ್ಮಣ್ಯ, ದಯಾನಂದ ಬಂಗ್ಲೆಗುಡ್ಡೆ, ಭಾರತಿ ಕಟ್ಟ, ಮೋಹನ ಕುಂಟಿಕಾನ ಇದ್ದರು.