ಜಿಲ್ಲೆಯಾದ್ಯಂತ ಮಳೆ ಇಳಿಮುಖ
ಮಂಗಳೂರು/ಸುಬ್ರಹ್ಮಣ್ಯ: ಕಳೆದ ವಾರ ಸುಬ್ರಹ್ಮಣ್ಯ ಪರಿಸರ ಹಾಗೂ ಕುಮಾರ ಪರ್ವತ ಮತ್ತು ಘಟ್ಟದ ಮೇಲೆ ಸುರಿದ ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ಕುಮಾರಧಾರಾ ನದಿಯಲ್ಲಿ ಇದೀಗ ನೀರು ಇಳಿಮುಖಗೊಂಡಿದೆ.
ಕಳೆದ ಎರಡು ದಿನಗಳಿಂದ ಮಳೆ ಕ್ಷೀಣಗೊಂಡು ಬಿಸಿಲು ಗೋಚರಿಸಿದೆ. ಶುಕ್ರವಾರ ಹಾಗೂ ಶನಿವಾರ ಕ್ಷೇತ್ರದಲ್ಲಿ ಒಂದೆರಡು ಬಾರಿ ಬಿಟ್ಟರೆ ಉಳಿದಂತೆ ಮಳೆ ಆಗಿಲ್ಲ.
ಕಳೆದ ವಾರ ಭಾರಿ ಮಳೆಯಿಂದಾಗಿ ಸೇತುವೆ ಮುಳುಗಡೆಯಾಗಿ ಬೆಂಗಳೂರು, ಮಂಗಳೂರು, ಧರ್ಮಸ್ಥಳ, ಉಪ್ಪಿನಂಗಡಿ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ಏಕೈಕ ರಸ್ತೆ ಕಡಿತಗೊಂಡು ಯಾತ್ರಾರ್ಥಿಗಳು ಮತ್ತು ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ತೊಂದರೆಗೆ ಒಳಗಾಗಿದ್ದರು. ಇದೀಗ ನೀರು ಇಳಿಮುಖಗೊಂಡ ಕಾರಣ ಸೇತುವೆ ಸಂಚಾರಕ್ಕೆ ಸುಗಮವಾಗಿದೆ.
ಮಂಗಳೂರು ವರದಿ: ನಗರದಲ್ಲಿ ಮಳೆ ಕಡಿಮೆಯಾಗಿದ್ದು, ಬಿಟ್ಟು ಬಿಟ್ಟು ಮಳೆ ಸುರಿದಿದೆ. ಮಧ್ಯಾಹ್ನ ಬಿಸಿಲಿನ ವಾತಾವರಣವಿದ್ದು, ಸಂಜೆ ವೇಳೆ ಮಳೆ ಬಿರುಸುಗೊಂಡಿದೆ.
ಸೋಮೇಶ್ವರ ಉಚ್ಚಿಲದ ನಿವಾಸಿ ಚಂದ್ರಶೇಖರ್ ಅವರ ಮನೆ ಕಡಲ್ಕೊರೆತದಿಂದ ಅಪಾಯದಲ್ಲಿದ್ದು, ಶನಿವಾರ ಸಂಸದ ನಳಿನ್ ಕುಮಾರ್ ಕಟೀಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮಂಗಳೂರು ತಹಶೀಲ್ದಾರ್ ಶಿವಪ್ಪ ಅಲಮನಿ, ಉಚ್ಚಿಲ ಗ್ರಾಮ ಲೆಕ್ಕಿಗ ಭಾಸ್ಕರ್, ಜಿಲ್ಲಾ ಪಂಚಾಯ್ತಿ ಸದಸ್ಯ ಸತೀಶ್ ಕುಂಪಲ ಇದ್ದರು. ಶನಿವಾರ ಬೆಳಗ್ಗಿನವರೆಗೆ ಜಿಲ್ಲೆಯ ಬಜ್ಪೆಯಲ್ಲಿ 44.2 ಮಿ.ಮೀ. ಅಧಿಕ ಮಳೆ ಸುರಿದಿದೆ.
ಮಳೆ ವಿವರ: ಮೂಡುಬಿದಿರೆ- 42.2 ಮಿ.ಮೀ., ಬಂಟ್ವಾಳ- 33.4 ಮಿ.ಮೀ., ಮಂಗಳೂರು- 31.3 ಮಿ.ಮೀ., ಬೆಳ್ತಂಗಡಿ- 31.0 ಮಿ.ಮೀ., ಪುತ್ತೂರು- 31.0 ಮಿ.ಮೀ., ಕಡಬ- 31.2 ಮಿ.ಮೀ., ಸುಳ್ಯ- 27.0 ಮಿ.ಮೀ. ಮಳೆ ದಾಖಲಾಗಿದೆ.