ಸುಳ್ಯ: ಅಮಾನತುಗೊಂಡ ಶಿಕ್ಷಕರ ಮರುನೇಮಕ
ಸುಳ್ಯ: ಶಾಲೆಯಲ್ಲಿ ಗುಂಪುಗಾರಿಕೆ ಸೇರಿದಂತೆ ಹಲವು ಆರೋಪಗಳನ್ನು ಎದುರಿಸಿ ಸೇವೆಯಿಂದ ಅಮಾನತುಗೊಂಡಿದ್ದ ಆಲೆಟ್ಟಿ ಶಾಲೆಯ ಆರು ಮಂದಿ ಶಿಕ್ಷಕರು ಮತ್ತು ಒಬ್ಬ ಗುಮಾಸ್ತನನ್ನು ವಿವಿಧ ಶಾಲೆಗಳಿಗೆ ಮರುನೇಮಕಗೊಳಿಸಲಾಗಿದೆ.
ಶಾಲೆಯಲ್ಲಿ ಗುಂಪುಗಾರಿಕೆ, ಮಕ್ಕಳೆದುರೇ ಜಗಳ, ಅಶಿಸ್ತು ಸೇರಿದಂತೆ ಕರ್ತವ್ಯ ಲೋಪದ ಆಧಾರದಲ್ಲಿ ಆಲೆಟ್ಟಿ ಸರ್ಕಾರಿ ಪ್ರೌಢಶಾಲೆಯ ಆರು ಮಂದಿ ಶಿಕ್ಷಕರು ಮತ್ತು ಒಬ್ಬ ಗುಮಾಸ್ತನನ್ನು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಅಮಾನತುಗೊಳಿಸಿದ್ದರು. ಆಲೆಟ್ಟಿ ಶಾಲೆಗೆ ಬೇರೆಡೆಯಿಂದ ಶಿಕ್ಷಕರನ್ನು ವರ್ಗಾವಣೆಗೊಳಿಸಿ ನಿಯೋಜಿಸಲಾಗಿತ್ತು.
ಈ ಮಧ್ಯೆ ಶಾಲೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಭೇಟಿ ನೀಡಿದಾಗ ಯಾವುದೇ ಕಾರಣಕ್ಕೂ ಅಮಾನತುಗೊಂಡ ಶಿಕ್ಷಕರನ್ನು ಈ ಶಾಲೆಗೆ ಮರು ನೇಮಕ ಮಾಡಬಾರದೆಂದು ಊರವರು ಆಗ್ರಹಿಸಿದ್ದರು.