ಕಟ್ಟಡದಿಂದ ಬಿದ್ದು ವ್ಯಕ್ತಿ ಸಾವು
ಸುಳ್ಯ: ಜಲಾನಯನ ಇಲಾಖೆಯ ಪಂಜದ ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ತಂಡದ ನಾಯಕ, ಮಂಡ್ಯದ ಪಾಂಡವಪುರ ದಿ. ದೇವು ಎಂಬವರ ಏಕೈಕ ಪುತ್ರ ಮಹೇಶ್(29) ಅವರು ಕಟ್ಟಡದಿಂದ ಬಿದ್ದು ಯುವಕ ಮೃತಪಟ್ಟ ಘಟನೆ ಪಂಜದಲ್ಲಿ ಶನಿವಾರ ರಾತ್ರಿ ನಡೆದಿದೆ.
ಪಂಜದಲ್ಲಿ ಜಲಾನಯನ ನಿರ್ವಹಣಾ ಕಚೇರಿ ಇದ್ದು, ಮಹೇಶ್ ಪಂಜದ ಸುಬ್ರಾಯ ಭಟ್ ಸ್ಮಾರಕದ ಮೇಲಿನ ಮೊದಲಿನ ಅಂತಸ್ತಿನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ರಾತ್ರಿ ಕೊಠಡಿಯಿಂದ ಹೊರ ಹೋಗಿದ್ದು, ಆಕಸ್ಮಿಕವಾಗಿ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾರೆ. ಕೆಳಗೆ ಸುಮಾರು 20 ಫೀಟ್ ಆಳವಿದ್ದು, ಕಟ್ಟಡದ ಬದಿಯಲ್ಲಿದ್ದ ಸಿಮೆಂಟಿನ ಶೀಟು ಮತ್ತು ಕಬ್ಬಿಣ ಅವರಿಗೆ ಬಡಿದಿದೆ. ಕಟ್ಟಡದ ಮೇಲೆ ಬದಿಗೆ ತಡೆಗೆ ನಿರ್ಮಿಸಿದ್ದ ಎರಡು ಹೋಲೋ ಬ್ಲಾಕ್ ಅವರ ಮೇಲೆಯೇ ಬಿದ್ದಿತ್ತು. ಮುಖದ ಭಾಗಕ್ಕೆ ಬಲವಾದ ಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೊಠಡಿಯಲ್ಲಿ ಒಬ್ಬರೇ ಇದ್ದುದರಿಂದ ಮುಂಜಾನೆ ವಿಷಯ ಬೆಳಕಿಗೆ ಬಂದಿದೆ. ನಂತರ ಅವರ ಮೃತದೇಹವನ್ನು ಕಡಬದ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಲಾಯಿತು. ಎರಡು ವರ್ಷಗಳ ಹಿಂದೆ ಪಂಜಕ್ಕೆ ಉದ್ಯೋಗಕ್ಕೆ ಬಂದಿದ್ದರು. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.