ಬಸ್ತಿಪಡ್ಪು: ನಾಳೆ ಶ್ರೀನಿವಾಸ ಕಲ್ಯಾಣೋತ್ಸವ
ಬಂಟ್ವಾಳ: ಇಲ್ಲಿನ ಬಸ್ತಿಪಡ್ಪು ಶ್ರೀನಿವಾಸ ನಗರ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಜ್ಜಾಗಿದೆ. ಮಾ.3ರಂದು ಸಂಜೆ 5 ಗಂಟೆಗೆ ಇಲ್ಲಿನ ಶ್ರೀತಿರುಮಲ ತಿರುಪತಿ ದೇವಸ್ಥಾನ ಸನ್ನಿಧಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ಶ್ರೀನಿವಾಸ, ಭೂದೇವಿ ಹಾಗೂ ಶ್ರೀದೇವಿಯ ವಿಗ್ರಹ ಶನಿವಾರ ಬಂಟ್ವಾಳ ಪುರಪ್ರವೇಶ ಮಾಡಲಿವೆ ಎಂದು ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ ನಾಯಕ್ ತಿಳಿಸಿದ್ದಾರೆ. ಬಿ.ಸಿ. ರೋಡ್‌ನಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರ ವಿಗ್ರಹವನ್ನು ಬಂಟ್ವಾಳ ಶ್ರೀತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಇರಿಸಲಾಗುವುದು. ಈ ಸಂದರ್ಭ ದೇವರ ಮೂರ್ತಿಯ ಜೊತೆಗೆ ತಿರುಪತಿಯ ಋತ್ವಿಜ್ವರು, ಕಾಣಿಕೆ ಹುಂಡಿ ಆಗಮಿಸಲಿದೆ ಎಂದು ತಿಳಿಸಿದರು. ಭಾನುವಾರ ಮಧ್ಯಾಹ್ನ ಶ್ರೀದೇವರ ಮೆರವಣಿಗೆಯು ಬಂಟ್ವಾಳ ಪೇಟೆಯ ಮೂಲಕ ಬೈಪಾಸ್ ರಸ್ತೆಯಾಗಿ ಭಂಡಾರಿಬೆಟ್ಟುವಿನಿಂದ ಸಾಗಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ತಲುಪಲಿದೆ. ಅಲ್ಲಿಂದ ವಿವಿಧ ವಾದ್ಯಗೋಷ್ಠಿ, ಕಲಾತಂಡಗಳ ವೈಭವಪೂರ್ಣ ಮೆರವಣಿಗೆಯೊಂದಿಗೆ ದೇವರನ್ನು ಶ್ರೀನಿವಾಸ ನಗರದ ಕಲ್ಯಾಣ ಮಂಟಪಕ್ಕೆ ತರಲಾಗುವುದು ಎಂದು ರಾಜಾರಾಮ ನಾಯಕ್ ತಿಳಿಸಿದರು.
ಸಕಲ ವ್ಯವಸ್ಥೆ: ಮೊದಲ ಬಾರಿಗೆ ಬಂಟ್ವಾಳದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತಿದ್ದು, ಆರು ಎಕರೆ ಜಮೀನಿನಲ್ಲಿ ಆಕರ್ಷಕ ಕಲ್ಯಾಣ ಮಂಟಪ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದರು.