ಬಿಎಸ್‌ವೈ ಬಿಜೆಪಿ ಸೇರ್ಪಡೆ ವರಿಷ್ಠರಿಗೆ ಬಿಟ್ಟದ್ದು: ಸಚಿವ ಸುರೇಶ್ ಕುಮಾರ್
ಮಂಗಳೂರು: 'ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರನ್ನು ಪಕ್ಷಕ್ಕೆ ಸೇರಿಸುವ ನಿರ್ಧಾರ ವರಿಷ್ಠರ ವಿವೇಚನೆಗೆ ಬಿಟ್ಟದ್ದು. ವರಿಷ್ಠರ ಅಭಿಪ್ರಾಯಕ್ಕೆ ಒಮ್ಮತವಿದೆ' ಎಂದು ಕಾನೂನು ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ 'ಸಾರ್ಥಕ ಸಾಧನೆ- ಸರ್ವತೋಮುಖ ಅಭಿವೃದ್ಧಿ ಸಂಕಲ್ಪ' ಎಂಬ ಚಿಂತನೆಗಳ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಹೆಚ್ಚಿನ ಅಭಿವೃದ್ಧಿ ಯೋಜನೆಗಳ ಸೇರ್ಪಡೆಯೊಂದಿಗೆ ವಿವಿಧ ನಾಗರಿಕ ಸೌಲಭ್ಯಗಳನ್ನು ಒದಗಿಸುವಂತೆ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದರು. ನಗರದಲ್ಲಿ ಬಿಜೆಪಿ ಕಳೆದ 5 ವರ್ಷಗಳಿಂದ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಿದ್ದು, ಜನಪರ ಸೇವೆಗೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಸುರೇಶ್ ಕುಮಾರ್ ಕರೆ ನೀಡಿದ್ದಾರೆ.